ವಿಜಯಪುರ: ನನ್ನನ್ನ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಲು 25 ಕೋಟಿ ರೂ. ನೀಡಬೇಕೆಂದು ಅಂತ ಸಿಎಂ ಕುಮಾರಸ್ವಾಮಿ ಅವರು 2014ರಲ್ಲಿ ಕೇಳಿದ್ದರು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ವಿಧಾನಸಭಾ ಚುನಾವಣಾ ವೇಳೆ ಕುಮಾರಸ್ವಾಮಿ ಅವರು ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ನಾನು 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತೆ. ಇದರಿಂದಾಗಿ ನನ್ನನ್ನ ವಿಧಾನ ಪರಿಷತ್ ಸದಸ್ಯನಾಗಿ ಮಾಡಬೇಕು ಅಂತ ಮತಕ್ಷೇತ್ರದ ಜನರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದ್ದರು. ಆದರೆ ಅವರು 25 ಕೋಟಿ ರೂ. ಕೊಡುವಂತೆ ಕೇಳಿದರು. ಇದಕ್ಕೆ ಪೂರಕ ದಾಖಲೆಗಳು ನನ್ನ ಬಳಿ ಇವೆ ಎಂದು ದೂರಿದ್ದಾರೆ.
ಹಣ ಕೇಳಿದ ಕುಮಾರಸ್ವಾಮಿ ಅವರು, ಕಾರ್ಯಕರ್ತರಿಗೆ ಅವಮಾನ ಮಾಡಿದರು. ನಿಮ್ಮನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ ವಿಜಯಪುರ ಜಿಲ್ಲೆಯ ಅಭಿವೃದ್ಧಿಯಾಗುತ್ತಾ ಅಂತ ವ್ಯಂಗ್ಯವಾಡಿದರು. ಈಗ ಅದನ್ನು ಮರೆತು ನನಗೆ ಟೋಪಿ ಹಾಕುತ್ತಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡುತ್ತಾರೆ. ನಿಜವಾಗಿ ಯಾರು ಯಾರಿಗೆ ಮೋಸ ಮಾಡಿದ್ದಾರೆ ಎನ್ನುವುದನ್ನು ಹೇಳಬೇಕು ಎಂದು ಕಿಡಿಕಾರಿದರು.
ನಾಗಠಾಣ ಶಾಸಕ ದೇವಾನಂದ್ ಚೌಹಾಣ್ ಅವರಿಗೆ ನಾನು ಬಿಜೆಪಿ ಸೇರುವಂತೆ ಬೆದರಿಕೆ ಒಡ್ಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರ ಬಳಿ ಇರುವ ದಾಖಲೆಗಳನ್ನು ಪ್ರಸ್ತುತ ಪಡಿಸಲಿ. ಅವರು ಒಪ್ಪುವುದಾದರೆ ಮುಖಾಮುಖಿ ಚರ್ಚೆಗೂ ನಾನು ಸಿದ್ಧ ಸವಾಲು ಹಾಕಿದರು.
ಬಿಜೆಪಿಗೆ ಬರುವಂತೆ ದೇವಾನಂದ ಚವ್ಹಾಣ ಅವರಿಗೆ ಆಹ್ವಾನ ನೀಡಿಲ್ಲ. ನಿಜ ಹೇಳಬೇಕು ಅಂದ್ರೆ ಕುಮಾರಸ್ವಾಮಿ ಅವರೇ ನನಗೆ ಮೋಸ ಮಾಡಿದ್ದಾರೆ. 2013ರ ಚುನಾವಣೆಯಲ್ಲಿ ನನ್ನ ಪರ ಪ್ರಚಾರಕ್ಕೆ ಗೈರಾಗಿ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv