ಚೆನ್ನೈ: ಕರೂರ್ ಕಾಲ್ತುಳಿತದಲ್ಲಿ (Karur Stampede) 41 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ (Vijay) ತಮಿಳುನಾಡು ಪ್ರವಾಸವನ್ನು ಎರಡು ವಾರಗಳ ಕಾಲ ರದ್ದುಗೊಳಿಸಿದ್ದಾರೆ.
ಟಿವಿಕೆಯು ತನ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡು ನೋವು ಮತ್ತು ದುಃಖದಲ್ಲಿರುವ ಈ ಪರಿಸ್ಥಿತಿಯಲ್ಲಿ, ಮುಂದಿನ 2 ವಾರಗಳ ಕಾಲ ನಮ್ಮ ಪಕ್ಷದ ನಾಯಕ ವಿಜಯ್ ಅವರ ಸಾರ್ವಜನಿಕ ಸಭೆ, ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದೆ. ಇದನ್ನೂ ಓದಿ: ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ, ಬೆಂಬಲಿಗರಿಗೆ ಏನು ಮಾಡ್ಬೇಡಿ: ಸ್ಟಾಲಿನ್ ವಿರುದ್ಧ ವಿಜಯ್ ಕಿಡಿ
2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೊಸದಾಗಿ ಟಿವಿಕೆ ಪಕ್ಷ ಕಟ್ಟಿರುವ ನಟ ವಿಜಯ್, ತಮಿಳುನಾಡಿನಾದ್ಯಂತ ಬೃಹತ್ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಶನಿವಾರ (ಸೆ.27) ಕರೂರಿನಲ್ಲಿ ವಿಜಯ್ ಬೃಹತ್ ಸಮಾವೇಶ ಆಯೋಜಿಸಿದ್ದರು. ವಿಜಯ್ ಅನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ದುರಂತ ಸಂಭವಿಸಿ, ಮಕ್ಕಳು ಸೇರಿ 41 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟ ಪ್ರತಿ ಕುಟುಂಬಕ್ಕೆ ನಟ ವಿಜಯ್ 20 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದರು. ದುರಂತ ಸಂಭವಿಸಿದ್ದ 3 ಮೂರು ದಿನದ ಬಳಿಕ ವಿಜಯ್ ಘಟನೆ ಬಗ್ಗೆ ಬೇಸರ ಹಾಕಿ, ಶೀಘ್ರದಲ್ಲೇ ಮೃತರ ಕುಟುಂಬಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದರು.