– 500 ಕೋಟಿ ಬಜೆಟ್ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ
ಇದೇ ಜ.9 ರಂದು ತೆರೆ ಕಾಣಬೇಕಿದ್ದ ವಿಜಯ್ (Vijay) ಅವರ ಬಹುನಿರೀಕ್ಷಿತ ‘ಜನನಾಯಗನ್’ (Jana Nayagan) ಸಿನಿಮಾ ಬಿಡುಗಡೆಯನ್ನು ಭಾರತದಲ್ಲಿ ಮುಂದೂಡಲಾಗಿದೆ. ಸಿನಿಮಾ ಮುಂದೂಡಿರುವ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಪ್ರಕಟಣೆ ಹೊರಡಿಸಿದೆ.
ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆ ವಿಚಾರವನ್ನು ಪ್ರೇಕ್ಷಕರೊಂದಿಗೆ ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ. ಜ.9 ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಈ ಚಿತ್ರದ ಬಗೆಗಿನ ನಿರೀಕ್ಷೆ, ಉತ್ಸಾಹ ಮತ್ತು ಅಭಿಮಾನಿಗಳ ಭಾವನೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ನಿರ್ಧಾರವು ನಮಗೆ ಯಾರಿಗೂ ಸುಲಭವಲ್ಲ. ಸಿನಿಮಾ ಬಿಡುಗಡೆಯ ಹೊಸ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು. ಅಲ್ಲಿಯವರೆಗೆ, ನಿಮ್ಮ ತಾಳ್ಮೆ ಮತ್ತು ಪ್ರೀತಿಯನ್ನು ನಾವು ಬಯಸುತ್ತೇವೆ. ನಿಮ್ಮ ಅಚಲ ಬೆಂಬಲವೇ ನಮ್ಮ ದೊಡ್ಡ ಶಕ್ತಿ ಎಂದು ಪ್ರೊಡಕ್ಷನ್ಸ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಚಿತ್ರದ ಯುಕೆ ವಿತರಕರಾದ ಅಹಿಂಸಾ ಎಂಟರ್‌ಟೈನ್‌ಮೆಂಟ್ ಕೂಡ ಚಿತ್ರವನ್ನು ಮುಂದೂಡಲಾಗಿದೆ ಎಂದು ಘೋಷಿಸಿದೆ. ಕಳೆದ ಕೆಲವು ದಿನಗಳಿಂದ ಸೆನ್ಸಾರ್ ಮಂಡಳಿ ಹಾಗೂ ಸಿನಿಮಾದ ನಡುವಿನ ಗೊಂದಲವು ರಿಲೀಸ್ ವಿಳಂಬಕ್ಕೆ ಕಾರಣವಾಗಿದೆ. ಬುಧವಾರ, ಮದ್ರಾಸ್ ಹೈಕೋರ್ಟ್ ಚಿತ್ರದ ಬಿಡುಗಡೆಯ ಆದೇಶವನ್ನು ಕಾಯ್ದಿರಿಸಿದೆ. ಚಲನಚಿತ್ರವನ್ನು ಪರಿಶೀಲಿಸಲು ಹೊಸ ಸಮಿತಿಯನ್ನು ರಚಿಸುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಸೂಚನೆ ನೀಡಿದೆ.
ಜನನಾಯಗನ್ ತಂಡ ಮೊದಲ ಬಾರಿ ಸೆನ್ಸಾರ್‌ಗೆ ಸಿನಿಮಾವನ್ನು ತೋರಿಸಿದ ಬಳಿಕ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ಬದಲಾವಣೆಗಳನ್ನು ಮಾಡಿ ಮರು ವೀಕ್ಷಣೆಗೆ ನೀಡಲಾಗಿತ್ತು. ಇಲ್ಲಿಂದ ಸೆನ್ಸಾರ್ ಮಂಡಳಿ ಮತ್ತು ಸಿನಿಮಾ ತಂಡದ ನಡುವೆ ಗೊಂದಲಗಳು ಶುರುವಾಗಿವೆ.
ಈ ವಿಚಾರವಾಗಿ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್, ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಸಿನಿಮಾ ಬಿಡುಗಡೆ ಮಾಡುವ ತೀರ್ಪನ್ನು ಜ.9 ಕ್ಕೆ ಮುಂದೂಡಲಾಗಿದೆ.

