ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಪುತ್ರರ ನಡುವೆ ಬಿಗ್ ಫೈಟ್ ಎಂದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ವರುಣಾದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪುತ್ತಿದಂತೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ.
ವರುಣಾ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶಕ್ಕೆ ಬಿಎಸ್ ಯಡಿಯೂರಪ್ಪ ಆಗಮಿಸುವುದಕ್ಕೂ ಮುನ್ನ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್, ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರಿಗೆ ಟಿಕೆಟ್ ಘೋಷಣೆ ಮಾಡಬಾರದು. ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸುತ್ತದೆ. ನೀವು ಬಿ-ಫಾರಂ ಕೊಟ್ಟರೂ, ನಾವು ಸಿ-ಫಾರಂ ಕೊಡುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದರು ಎನ್ನಲಾಗಿದೆ.
ರಾಮ್ ಲಾಲ್ ಸೂಚನೆ ಮೇರೆಗೆ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ ವರುಣಾ ಕ್ಷೇತ್ರದ ಅಭ್ಯರ್ಥಿಯಾಗಿ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದರು. ಈ ಘೋಷಣೆ ಪ್ರಕಟವಾದ ಬೆನ್ನಲ್ಲೇ ಕಾರ್ಯಕರ್ತರು ಆಕ್ರೋಶಗೊಂಡು ವೇದಿಕೆಯ ಮೇಲೆ ಗಲಾಟೆ ಮಾಡಿದರು. ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಬಿಜೆಪಿ ಇಂದು ನಾಲ್ಕನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ ಅದರಲ್ಲಿ ವರುಣಾ ಮತ್ತು ಬಾದಾಮಿಯ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ವರುಣಾ ಕ್ಷೇತ್ರದ ಟಿಕೆಟ್ ಘೋಷಣೆ ಕುರಿತು ಇಂದು ಸಂಜೆ ಬಿಎಸ್‍ವೈ ಅವರು ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವೆ ಅಸಮಾಧಾನವಿದೆ ಎನ್ನುವ ಸುದ್ದಿ ಈ ಹಿಂದೆ ಕೇಳಿ ಬಂದಾಗ ನಾಯಕರು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿ ಸುದ್ದಿಗಳನ್ನು ತಳ್ಳಿ ಹಾಕುತ್ತಿದ್ದರು. ಆದರೆ ಈಗ ಟೆಕೆಟ್ ತಪ್ಪಿಸುವ ಮೂಲಕ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ರಾಜ್ಯದ ಹಿರಿಯ ನಾಯಕರೇ ಷಡ್ಯಂತ್ರ ನಡೆಸಿದ್ದರಾ ಎನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದ್ದು ಗೊಂದಲವನ್ನು ಪರಿಹರಿಸಬೇಕಿದೆ.
ಈ ನಡುವೆ ಬಿಜೆಪಿ ಹೈಕಮಾಂಡ್ ಮೇಲೆ ಯಡಿಯೂರಪ್ಪ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದ್ದು, ಯಾರೊಂದಿಗೂ ಮಾತನಾಡದೇ ಬಿಎಸ್‍ವೈ `ಕುದಿ’ಮೌನ ತಾಳಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಕುರಿತು ಬಿಎಸ್‍ವೈ ತಮ್ಮ ಆಪ್ತರೊಂದಿಗೆ ಆಕ್ರೋಶ ಹೊರ ಹಾಕಿರುವ ವಿಚಾರ ಮೂಲಗಳಿಂದ ಸಿಕ್ಕಿದೆ.
ಈ ನಡುವೆ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿಸಲು ಆರ್ ಎಸ್‍ಎಸ್ ನಾಯಕರು ಅಡ್ಡಗಾಲು ಹಾಕಿದೆ ಎನ್ನಲಾಗಿದ್ದು, ಬಿಜೆಪಿ ಹೈಕಮಾಂಡ್‍ಗೆ ದೂರು ನೀಡಲಾಗಿತ್ತು. ಹಲವು ಆರ್ ಎಸ್‍ಎಸ್ ನಾಯಕರು ಬಿಎಸ್‍ವೈ ಪುತ್ರ ವಿಜಯೇಂದ್ರನಿಗೆ ಟಿಕೆಟ್ ನೀಡಬಾರದು ಎಂದು ಪ್ರಬಲವಾಗಿ ವಾದ ಮಂಡಿಸಿದ್ದರು. ಈ ಒತ್ತಡಕ್ಕೆ ಮಣಿದು ವಿಜಯೇಂದ್ರ ಅವರಿಗೆ ಬಿ ಫಾರಂ ನೀಡಿಲ್ಲ ಎನ್ನಲಾಗಿದೆ.