ಮೈಸೂರು: ತೀವ್ರ ಕುತೂಹಲ ಮೂಡಿಸಿದ್ದ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುವುದಿಲ್ಲ, ಇಲ್ಲಿ ಸಾಮಾನ್ಯ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂಪ್ಪ ತಿಳಿಸಿದ್ದಾರೆ.
ಇಂದು ವರುಣಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಬಿಎಸ್‍ವೈ, ಕ್ಷೇತ್ರದ ಜನರು ತಮ್ಮ ಮಗ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದರು. ಕಾರ್ಯಕರ್ತರ ಒತ್ತಡದ ಮೇರೆಗೆ ವಿಜಯೇಂದ್ರರನ್ನು ಕ್ಷೇತ್ರ ಪ್ರವಾಸ ಮಾಡಲು ಸೂಚಿಸಲಾಗಿತ್ತು. ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಒಂದೇ ಕ್ಷೇತ್ರಕ್ಕೆ ಸಿಮೀತವಾಗುವುದು ಬೇಡ. ಅದ್ದರಿಂದ ವರುಣಾ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ತಿಳಿಸಿದರು.
ಬಿಎಸ್‍ವೈ ಅವರ ನಿರ್ಧಾರ ಸಮಾವೇಶದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಉಂಟುಮಾಡಿದೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ವೇದಿಕೆಯಲ್ಲಿ ಗದ್ದಲ ಉಂಟು ಮಾಡಿದ್ದಾರೆ. ಅಲ್ಲದೇ ವಿಜಯೇಂದ್ರ ಅವರಿಗೆ ಮುತ್ತಿಗೆ ಹಾಕಿ ಕ್ಷೇತ್ರದಿಂದ ತಾವೇ ಸ್ಪರ್ಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸಮಾವೇಶಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರ ಅವರೇ ಪಕ್ಷ ಅಭ್ಯರ್ಥಿ ಎಂದು ತಿಳಿದಿದ್ದರು. ಇದರಂತೆ ವಿಜಯೇಂದ್ರ ಅವರು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿಲು ಸಿದ್ಧತೆ ಕೂಡ ನಡೆಸಿದ್ದರು.
ಬಿಜೆಪಿ ಹೈಕಮಾಂಡ್ ಈ ನಡೆಯಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಬದಲಾವಣೆಯಾಗುವ ಸಾಧ್ಯತೆಗಳು ಇದೆ. ಆರಂಭದಿಂದಲೂ ಬಿಎಸ್‍ವೈ ಅವರನ್ನೇ ರಾಜ್ಯದ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದ ಹೈಕಮಾಂಡ್ ರಾಜ್ಯಾಧ್ಯಕ್ಷ ಪುತ್ರನಿಗೆ ಟಿಕೆಟ್ ನೀಡದಿರುವುದು ಕುತೂಹಲ ಮೂಡಿಸಿದೆ.