ರಾಯಚೂರು: ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಆದರೆ ಅವರಿಗೆ ಒಂದು ಕ್ಷೇತ್ರವೂ ಸಿಗುತ್ತಿಲ್ಲ. ಇಂತಹ ಮಹಾನ್ ನಾಯಕರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ವ್ಯಂಗ್ಯವಾಡಿದ್ದಾರೆ.
ರಾಯಚೂರಿನಲ್ಲಿ (Raichur) ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿದ ವೇಳೆ ಸಿದ್ದರಾಮಯ್ಯ (Siddaramaiah) ವರುಣದಿಂದ ಸ್ಪರ್ಧಿಸುವ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಸಿದರು. ಮಾಜಿ ಸಿಎಂಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್‍ಗೆ ಮರಾಠಿಗರ ಖಡಕ್ ವಾರ್ನಿಂಗ್
ಶಿಕಾರಿಪುರದಿಂದ (Shikaripur) ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿ, ಬಿಎಸ್ ಯಡಿಯೂರಪ್ಪ (B.S.Yediyurappa) ಈಗಾಗಲೆ ಘೋಷಣೆ ಮಾಡಿದ್ದಾರೆ. ನಾನು ಶಿಕಾರಿಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂತಿಮ ತೀರ್ಮಾನ ಕೇಂದ್ರ ನಾಯಕರು ಮಾಡುತ್ತಾರೆ ಎಂದಿದ್ದಾರೆ.
ಸಚಿವ ಸೋಮಣ್ಣ ದೂರು ವಿಚಾರವಾಗಿ, ನನ್ನ ಬಗ್ಗೆ ಯಾರು ದೂರು ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ದೆಹಲಿ ನಾಯಕರಿಗೆ ದೂರು ಹೋಗಿದೆ ಎಂದರೆ ಆ ವ್ಯಕ್ತಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎಂದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಎಂಬ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿಕೆಗೆ, ಶಾಸಕರು ಉತ್ಸಾಹದಲ್ಲಿ ಹಾಗೆ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಯಾರು ಮುಖ್ಯಮಂತ್ರಿ ಆಗಬೇಕೆಂದು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಕೆಟ್ ಹಂಚಿಕೆ ಕುರಿತು ಪ್ರತಿಕ್ರಿಯಿಸಿ, ಯಾರಿಗೆ ಟಿಕೆಟ್ ನೀಡಬೇಕೆಂದು ನಮ್ಮ ನಾಯಕರು ತೀರ್ಮಾನಿಸಿ ಟಿಕೆಟ್ ನೀಡುತ್ತಾರೆ. ಪಕ್ಷದಲ್ಲಿ ಕುಟುಂಬ ರಾಜಕೀಯವಿಲ್ಲ. ಯಾರದೋ ಮಗ, ಅಣ್ಣನ ಮಗ ಎಂಬ ಕಾರಣಕ್ಕೆ ಟಿಕೆಟ್ ನೀಡುವುದಿಲ್ಲ. ಅರ್ಹತೆ ಆಧಾರದ ಮೇಲೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನರೇಂದ್ರ ಮೋದಿಯವರ (Narendra Modi) ನಾಯಕತ್ವವನ್ನು ಜನ ಒಪ್ಪಿಕೊಂಡಿದ್ದಾರೆ. ಸರ್ಕಾರದ ಯೋಜನೆಗಳಿಂದ ಜನರು ಸಂತೃಪ್ತರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ (BJP) ಬೆಂಬಲ ಸಿಗುತ್ತಿದೆ. ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2 ತಿಂಗಳಿಂದ ನನ್ನನ್ನು ಉಜ್ಜುತ್ತಾ ಇದ್ದೀರಿ, ಎಷ್ಟು ಉಜ್ಜಬೇಕೋ ಉಜ್ಜಿಕೊಳ್ಳಿ: ಸೋಮಣ್ಣ