– ನಮ್ಮ ಕಾರ್ಯಕರ್ತರ ಮೇಲೆ ಸರ್ಕಾರದ ದಬ್ಬಾಳಿಕೆ ಸಹಿಸಲ್ಲ
ಬೆಂಗಳೂರು: ಬಿಜೆಪಿ ಸುಭದ್ರ ಹಾಗೂ ಶಕ್ತಿಯುತವಾಗಿದೆ. ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡ್ತಿದೆ ಎಂದು ಹೇಳಿದ ಅಯೋಗ್ಯರು ಯಾರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ತೀಕ್ಷ್ಣ ಕಿಡಿಕಾರಿದರು.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನಾವೂ ಇದೀವಿ ಎಂದು ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ ಎಂಬ ಡಿಕೆಶಿ ಟೀಕೆಗೆ ಟಕ್ಕರ್ ಕೊಟ್ಟರು. ಯಾವ ಅಯೋಗ್ಯ ಇದನ್ನು ಹೇಳಿರೋದು? ನಮಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಕಾಂಗ್ರೆಸ್‌ನವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ ನಮಗಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, 5 ತಿಂಗಳಲ್ಲಿ ಪರಿಹಾರ: ರಿಷಬ್‌ಗೆ ಪಂಜುರ್ಲಿ ಅಭಯ
ಭಾನುವಾರವಷ್ಟೇ ನಮ್ಮ ಪಕ್ಷದ ಸಂಸ್ಥಾಪನಾ ದಿನ ಮಾಡಿದ್ದೇವೆ. ವಿಶ್ವದ ಅತೀ ದೊಡ್ಡ ಪಕ್ಷ ಬಿಜೆಪಿ. ಕಾಂಗ್ರೆಸ್‌ಗೆ (Congress) ಇವತ್ತು ಯಾವ ಪರಿಸ್ಥಿತಿ ಬಂದಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿಲ್ಲ. ಚುನಾವಣೆಗಳು ಇಲ್ಲದಿದ್ದರೂ ಜನಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮದೇ ಆದ ಕೆಲ ತಪ್ಪುಗಳಿಂದ ನಾವು ಈ ಬಾರಿ ಅಧಿಕಾರಕ್ಕೆ ಬರದಿರಬಹುದು ಅಷ್ಟೇ. ಕಾಂಗ್ರೆಸ್‌ನವರ ಅನೇಕ ಹೋರಾಟ ಮಾಡಿದ್ದೇ ಚುನಾವಣೆಗಳು ಹತ್ತಿರ ಬಂದಾಗ. ಡಿಕೆಶಿ ಮೇಕೆದಾಟು ಪಾದಯಾತ್ರೆ ಮಾಡಿದ್ದು ಚುನಾವಣೆಗಾಗಿಯೇ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಭ್ರಷ್ಟ ಸರ್ಕಾರದ ದರ ಏರಿಕೆ, ಅಟ್ಟಹಾಸ ಜನರ ಮುಂದಿಡ್ತೇವೆ: ವಿಜಯೇಂದ್ರ
ಇನ್ನೂ ವಿನಯ್ ಸೋಮಯ್ಯ (Vinay Somaiah) ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿ, ಪೊಲೀಸರು ಕ್ರೂರವಾಗಿ ನಡೆದುಕೊಂಡಿದ್ದಾರೆ. ಬೇಲ್ ಸಿಕ್ಕ ಮೇಲೂ ಪೊಲೀಸರು ವಿನಯ್ ಮನೆಗೆ ಹೋಗುತ್ತಾರೆ ಎಂದರೆ ಏನು ಹೇಳೋದು? ಈ ಪ್ರಕರಣ ಇಲ್ಲಿಗೇ ಬಿಡುವುದಿಲ್ಲ. ಕಾನೂನು ಹೋರಾಟ ಮಾಡ್ತೇವೆ ಎಂದರು. ಇದನ್ನೂ ಓದಿ: ಬೆಂಗಳೂರು ದೊಡ್ಡ ನಗರ, ಅಲ್ಲೊಂದು-ಇಲ್ಲೊಂದು ಕಿರುಕುಳ ಘಟನೆ ಆಗುತ್ತೆ: ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ
ನಮ್ಮ ಕಾರ್ಯಕರ್ತರ ಮೇಲೆ ಸರ್ಕಾರದ ದಬ್ಬಾಳಿಕೆ ಸಹಿಸಲ್ಲ ರಾಜ್ಯ ಬಿಜೆಪಿಯಿಂದ ಏನೆಲ್ಲಾ ಮಾಡಬೇಕೋ ಎಲ್ಲ ಮಾಡಿದ್ದೇವೆ. ಆದರೆ ಪೊಲೀಸರ ಕಿರುಕುಳ ಬಗ್ಗೆ ವಿನಯ್ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸರ್ಕಾರದ ದಬ್ಬಾಳಿಕೆ ಸಹಿಸಲ್ಲ. ಯಾರೇ ಹಿಂದೂ, ಬಿಜೆಪಿ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಸಮಸ್ಯೆಗೆ ಸಿಕ್ಕಿಕೊಂಡಿದ್ದರೆ ಅಥವಾ ಕಾಂಗ್ರೆಸ್ ಪುಡಾರಿಗಳಿಂದ ತೊಂದರೆ ಆದರೆ ನೇರವಾಗಿ ಸಂಪರ್ಕಿಸಲಿ. ನಾವು ಅವರಿಗೆ ಏನು ಕಾನೂನು ಅನುಕೂಲ ಬೇಕೋ ಅದನ್ನು ಒದಗಿಸುತ್ತೇವೆ. ಬಿಜೆಪಿ ಅವರ ಜೊತೆ ಇದೆ ಎಂದು ಕಾರ್ಯಕರ್ತರಿಗೆ ಅಭಯ ನೀಡಿದರು.