– ವಿರೋಧಿಗಳಿಗೆ ಟಾಂಗ್ ಕೊಟ್ಟ ರಾಷ್ಟ್ರೀಯ ಅಧ್ಯಕ್ಷ
ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ (Vijayendra) ಅವರನ್ನು ನೇಮಕ ಮಾಡಿದ್ದನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಪತ್ರಿಕೆಯೊಂದು ನಡೆಸಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಜೆ.ಪಿ.ನಡ್ಡಾ (J.P.Nadda), ಬಿ.ವೈ.ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯದಿಂದಾಗಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಪಕ್ಷದ ಆಸ್ತಿ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ.15ಕ್ಕೆ ವಿಜಯೇಂದ್ರ ಪದಗ್ರಹಣ
ಎಲ್ಲರೂ ಬಹುನಿರೀಕ್ಷಿಸುತ್ತಿದ್ದ ಸಮಯದಲ್ಲಿ, ಕರ್ನಾಟಕದಲ್ಲಿ ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ನಿರ್ಧಾರದ ಹಿಂದೆ ಏನು ಸಂದೇಶ ಅಡಗಿದೆ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ನಡ್ಡಾ, ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯದ ಮೂಲಕ ಈ ನಾಯಕತ್ವವನ್ನು ಗಳಿಸಿದ್ದಾರೆ ಎನ್ನುವುದೇ ಅದರ ಮೊದಲ ಸಂದೇಶ ಎಂದಿದ್ದಾರೆ.
ಪಕ್ಷ ಸಂಘಟನೆಗೆ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದಲ್ಲದೇ, ಅವರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭವಾಗಿದೆ. ಪಕ್ಷಕ್ಕೆ ತಾವು ದೊಡ್ಡ ಆಸ್ತಿ ಎಂದು ಅವರು ಸಾಬೀತುಪಡಿಸಿದ್ದಾರೆ. ಯುವ ನಾಯಕರಾಗಿರುವ ವಿಜಯೇಂದ್ರ ಅವರ ನೇಮಕವಾಗಿದೆ. ಬಿಜೆಪಿಯು ಶ್ರಮಶೀಲ ಯುವಶಕ್ತಿಯನ್ನು ಗೌರವಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಬೆಂಗಾವಲು ವಾಹನ, ಪೊಲೀಸ್ ಭದ್ರತೆ ಕಲ್ಪಿಸಿದ ಸರ್ಕಾರ
ಈ ನೇಮಕಾತಿಯ ನಂತರ ಕರ್ನಾಟಕದ ಸಂಘಟನೆಯಲ್ಲಿ ದೊಡ್ಡ ಪರಿವರ್ತನೆಯನ್ನು ನಾವು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ, ನಾವು ಯಾವಾಗಲೂ ಧನಾತ್ಮಕ ಬದಲಾವಣೆ ಮತ್ತು ಸುಧಾರಣೆಯನ್ನು ಪ್ರತಿಪಾದಿಸಿದ್ದೇವೆ. ಈ ನೇಮಕಾತಿಯು ಸಕಾರಾತ್ಮಕ ಬೆಳವಣಿಗೆಗಳನ್ನು ಉತ್ತೇಜಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ನೀವು ಪಕ್ಷದ ಕರ್ನಾಟಕ ಘಟಕದಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರ ನೇಮಕವು ಬಿಜೆಪಿ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಿ.ಸೋಮಣ್ಣ ಅವರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ