– ಮಹಾರಾಷ್ಟ್ರಕ್ಕೆ ದರೋಡೆಕೋರರ ಗ್ಯಾಂಗ್ ಎಸ್ಕೇಪ್?
ವಿಜಯಪುರ: ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದು, ದರೋಡೆಕೋರರು ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಬ್ಯಾಂಕ್‌ನಲ್ಲಿ ಠೇವಣಿ, ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲಾಗಿದ್ದಾರೆ.
ಬ್ಯಾಂಕ್‌ನಲ್ಲಿ 1 ಕೋಟಿ ನಗದು, 12 ರಿಂದ 13 ಕೆ.ಜಿ ಚಿನ್ನ ದರೋಡೆಯಾಗಿದೆ. ಸಾಲಕ್ಕಾಗಿ ಅಡವಿಟ್ಟಿದ್ದ 12-13 ಕೆಜಿ ಚಿನ್ನ ದರೋಡೆಯಾಗಿರುವ ಸಾಧ್ಯತೆ ಇದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮೂಲಗಳಿಂದ ಮಾಹಿತಿ ಸಿಗಬೇಕಿದೆ ಎಂದು ತಿಳಿಸಿದ್ದಾರೆ.
ಐದಕ್ಕೂ ಅಧಿಕ ಮುಸುಕುಧಾರಿ ದರೋಡೆಕೋರರಿಂದ ಕೃತ್ಯ ನಡೆದಿದೆ. ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿನ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರೆ ಸಿಬ್ಬಂದಿ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿ ದರೋಡೆ ನಡೆಸಲಾಗಿದೆ. ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಆಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಘಟನೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮ್ಯಾನೇಜರ್ ಹಾಗೂ ಇತರರು ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನಲ್ಲಿದ್ದ ನಗದು ಹಣ, ಚಿನ್ನಾಭರಣಗಳ ಕುರಿತು ಮೇಲಧಿಕಾರಿಗಳು ಬಂದ ಬಳಿಕ ಮಾಹಿತಿ ನೀಡುವುದಾಗಿ ಮ್ಯಾನೇಜರ್ ಹೇಳಿದ್ದಾರೆ.
ರಜೆಯಲ್ಲಿದ್ದ ಬ್ಯಾಂಕ್ ಸೆಕ್ಯುರಿಟಿ
ಬ್ಯಾಂಕ್ ಸೆಕ್ಯುರಿಟಿ ಮೂರು ತಿಂಗಳಿಂದ ರಜೆಯಲ್ಲಿದ್ದಾರೆ. ಬ್ಯಾಂಕ್ ಪಕ್ಕದಲ್ಲೇ ಇರುವ ಎಟಿಎಂ ಸೆಕ್ಯುರಿಟಿಯನ್ನು ಕೂಡ ಒಳಗಡೆ ಲಾಕ್ ಮಾಡಿದ್ದರು. ಐದು ಜನ ದರೋಡೆಕೋರರು ಬಂದಿದ್ದರು. ಇಬ್ಬರು ಬ್ಯಾಂಕ್ ಹೊರಗಡೆ ನಿಂತರೆ, ಮೂವರು ಬ್ಯಾಂಕ್ ಒಳಗಡೆ ಹೋಗಿ ದರೋಡೆ ಮಾಡಿದ್ದಾರೆ. ಬ್ಯಾಂಕ್‌ಗೆ ಎಂಟ್ರಿ ಕೊಡ್ತಿದ್ದಂತೆ ಮೊದಲು ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ನಂತರ ಬ್ಯಾಂಕ್‌ನ ಎಲ್ಲ ಸಿಬ್ಬಂದಿ ಹಾಗೂ ಎಟಿಎಂ ಸೆಕ್ಯುರಿಟಿಯನ್ನ ಒಂದು ಕೋಣೆಯಲ್ಲಿ ಕೂಡ ಹಾಕಿ, ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಹುಲ್ಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಇದಕ್ಕೂ ಮುನ್ನ ಬ್ಯಾಂಕ್‌ಗೆ ಮೂರು ದಿನದಿಂದ ಭೇಟಿ ಕೊಟ್ಟಿದ್ದರು. ಆಗ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡೆ ಬ್ಯಾಂಕ್‌ಗೆ ಎಂಟ್ರಿ ಕೊಟ್ಟಿದ್ದರು. ಮೂರು ದಿನಗಳಿಂದ ಬ್ಯಾಂಕ್ ಸಿಬ್ಬಂದಿ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಈ ಮುಸುಕುಧಾರಿ ದರೋಡೆಕೋರರನ್ನು ಎಟಿಎಂ ಸೆಕ್ಯುರಿಟಿ ಗುರುತಿಸಿದ್ದಾರೆ.
ಬ್ಯಾಂಕ್‌ನಲ್ಲಿದ್ದ ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ಖಾಕಿ ಪಡೆ ನಿರತವಾಗಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೆ ರಸ್ತೆಗಳಿಗೂ ನಾಕಾ ಬಂದಿ ಹಾಕಿದ್ದಾರೆ. ಮಹಾರಾಷ್ಟ್ರದ ದರೋಡೆಕೋರರ ಗ್ಯಾಂಗ್‌ನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರಲ್ಲಿ ಓರ್ವ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹುಲ್ಲಜಂತಿ ಗ್ರಾಮದಲ್ಲಿ ದರೋಡೆಕೋರರು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ದರೋಡೆಕೋರನನ್ನು ಬೈಕ್ ಸವಾರ ಹಾಗೂ ಗ್ರಾಮಸ್ಥರು ಬೆನ್ನುಹತ್ತಿದ್ದರು. ಗ್ರಾಮದಲ್ಲೇ ವಾಹನ ಚಲಾಯಿಸಿ ರಸ್ತೆ ಬಂದ್ ಆದ ಕಾರಣ ಗ್ರಾಮಸ್ಥರ ಮಧ್ಯೆ ಲಾಕ್ ಆಗಿದ್ದರು. ಗ್ರಾಮಸ್ಥರಿಗೆ ಪಿಸ್ತೂಲ್ ತೋರಿಸಿ ವಾಹನ ಬಿಟ್ಟು ದರೋಡೆ ಮಾಡಿದ ನಗದು, ಚಿನ್ನಾಭರಣದ ಮೂಟೆ ಹೊತ್ತು ದರೋಡೆಕೋರರು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ದರೋಡೆಕೋರರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ದರೋಡೆ ನಂತರ ದರೋಡೆಕೋರರು ಬೇರೆ ಬೇರೆಯಾಗಿ ಪರಾರಿಯಾಗಿದ್ದಾರೆ. ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.
ಗ್ರಾಹಕರಲ್ಲಿ ಆತಂಕ
ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. ದರೋಡೆಕೋರನ ಕೃತ್ಯಕ್ಕೆ ಹುಲಜಂತಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ವಾಹನ ಬಿಟ್ಟ ಸ್ಥಳ ಹಾಗೂ ಬ್ಯಾಂಕ್ ಹತ್ತಿರ ಪೊಲೀಸರ ಕಣ್ಗಾವಲು ಇಡಲಾಗಿದೆ. ವಾಹನ ಬಿಟ್ಟಲ್ಲಿ ಹಾಗೂ ಬ್ಯಾಂಕ್‌ನಲ್ಲಿ ಶ್ವಾನದಳ, ಬೆರಳಚ್ಚು ತಜ್ಞರಿಂದ ತಪಾಸಣೆ ನಡೆಸಿದ್ದಾರೆ.
ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲಾಗಿದ್ದಾರೆ. ‘ಲಾಕರ್‌ನಲ್ಲಿ 100 ಗ್ರಾಂ ಚಿನ್ನದ ಆಭರಣ, ಅರ್ಧ ಕೆಜಿ ಬೆಳ್ಳಿ ಇಟ್ಟಿದ್ದೆ. 40 ಗ್ರಾಂ ಚಿನ್ನಾಭರಣ ಪ್ಲಜ್ ಮಾಡಿ 2.5 ಲಕ್ಷ ಲೋನ್ ಪಡದಿದ್ದೆ. ಇದೀಗ ದರೋಡೆ ಸುದ್ದಿ ಕೇಳಿ ಆತಂಕ ಮೂಡಿದೆ ಎಂದು ಗ್ರಾಹಕ ಸಂಗಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಜಮಾಯಿಸುತ್ತಿದ್ದಾರೆ. ನಮ್ಮ ಚಿನ್ನಾಭರಣ ಹೋಗಿದೆಯಾ ಅನ್ನೋದರ ಬಗ್ಗೆ ಮಾಹಿತಿ ಪಡೆಯಲು ಗ್ರಾಹಕರು ಬಂದಿದ್ದಾರೆ. ಮತ್ತೊಂದು ಕಡೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಆರೋಪಿಗಳಿಗಾಗಿ ತಲಾಷ್ ನಡೆಸಿದ್ದಾರೆ.