ವಿಜಯಪುರ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ 42 ಆರೋಪಿಗಳನ್ನು ಅರೆಸ್ಟ್ ಮಾಡಿ, 1.20 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ಉಪವಿಭಾಗದ ವ್ಯಾಪ್ತಿಯಲ್ಲಿ 2024ರಿಂದ 2026ರವರೆಗಿನ ಅವಧಿಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಸರಣಿ ಕಳ್ಳತನ ಮತ್ತು ದರೋಡೆ ಸೇರಿ ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮೂಲಕ ಒಟ್ಟು 1.20 ಕೋಟಿ ರೂ. ಅಧಿಕ ಮೌಲ್ಯದ ಚಿನ್ನಾಭರಣ, ವಾಹನಗಳನ್ನು ವಶಕ್ಕೆ ಪಡೆದು, 42 ಆರೋಪಿಗಳ ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಬಜೆಟ್ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿದ ಸರ್ಕಾರ, ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ: ಅಶೋಕ್ʼ
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ಕಳ್ಳತನವಾಗಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಜೆಸಿಬಿ, ಪಿಕಪ್ ವ್ಯಾನ್, ಸ್ಕಾರ್ಪಿಯೋ, ಟ್ರ‍್ಯಾಕ್ಟರ್‌ಗಳು, ಮೋಟಾರ್ ಸೈಕಲ್‌ಗಳು ಹಾಗೂ ನೀರಿನ ಪಂಪ್ ಸೆಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಡಚಣದ ದೇವಸ್ಥಾನ ಕಳ್ಳತನ, ಆಲಮೇಲದ ಫೈನಾನ್ಸ್ ಒಂದರಲ್ಲಿ ನಡೆದಿದ್ದ ನಗದು ಕಳ್ಳತನ, ಹೊರ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ತಡೆದು ನಡೆಸಿದ್ದ ದರೋಡೆ ಪ್ರಕರಣ, ಈ ರೀತಿ ವಿವಿಧ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ವಿಜಯಪುರ ಪೋಲಿಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

