ವಿಜಯಪುರ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಮರಗಳ ಮಾರಣಹೋಮವೇ ನಡೆಯುತ್ತದೆ. ಈ ಮರಗಳ ಮಾರಣಹೋಮ ತಪ್ಪಿಸಲು ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದ್ದು, ವಿಜಯಪುರ – ಸೋಲ್ಲಾಪುರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಬರುವ ಮರಗಳನ್ನು ಬುಡಸಮೇತ ತೆಗೆದು ಅವುಗಳಿಗೆ ಮರುಜೀವ ನೀಡುವ ಕುರಿತು ಯೋಜನೆ ರೂಪಿಸಿವೆ.
ಬರದ ನಾಡು ಎಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಈ ತರಹದ ಹೊಸ ಪ್ರಯತ್ನ ಹಮ್ಮಿಕೊಳ್ಳಲಾಗಿದೆ. ವಿಜಯಪುರ – ಸೋಲ್ಲಾಪುರ ನಡುವೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 110 ಕಿ.ಮೀ. ಹೊಂದಿದ್ದು, ವಿಜಯಪುರ ಜಿಲ್ಲೆಯಲ್ಲೇ 72 ಕಿ.ಮೀ ವ್ಯಾಪ್ತಿ ಹೊಂದಿದೆ. ಈ ವ್ಯಾಪ್ತಿಯ ರಸ್ತೆ ಅಗಲೀಕರಣದಲ್ಲಿ ನಾಶವಾಗಬಹುದಾದ 3,019 ಮರಗಳನ್ನು ಕಡಿಯದೇ ಅವುಗಳನ್ನು ಮತ್ತೆ ಪುನರ್ ಸ್ಥಾಪನೆ ಮಾಡಲು ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
Advertisement
Advertisement
ಈಗಾಗಲೇ ನಗರದ ಹೊರವಲಯದಿಂದ ಮರಗಳ ಸ್ಥಳಾಂತರ ಕಾರ್ಯ ಮುಂದುವರಿದಿದ್ದು, 200ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರ ಮಾಡಿ ಅವುಗಳಿಗೆ ಮರು ಜೀವ ಕಲ್ಪಿಸಲಾಗಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಚುರುಕುಗೊಂಡಿದೆ. ಅರಣ್ಯ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೆಲವೊಂದು ನಿಯಮಾವಳಿಗಳನ್ನು ವಿಧಿಸಿದ್ದು, 1.20 ಮೀಟರ್ ಸುತ್ತಳತೆ ಇರುವ ದಪ್ಪ ಮರಗಳನ್ನು ಮಾತ್ರ ಕಡಿಯಲು ಅನುಮತಿ ನೀಡಿದೆ.
Advertisement
ಈಗಾಗಲೇ ನಡೆಸಿರುವ ಸಮೀಕ್ಷೆ ಪ್ರಕಾರ ಸರಿಸುಮಾರು 1,252 ಮರಗಳು ಉರುಳಲಿವೆ. ಇನ್ನು ಉರುಳಿರುವ ಮರಗಳ ಬದಲಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ನಿರ್ಮಾಣದ ನಂತರ ಗಿಡ ನೆಡುವ ಕಾರ್ಯವನ್ನು ಅರಣ್ಯ ಇಲಾಖೆಗೆ ವಹಿಸಿದ್ದು, ಅದಕ್ಕೆ ಸರಿಸುಮಾರು 3.50 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ 1.8 ಕೋಟಿ ರೂ. ಅನ್ನು ಪ್ರಾಧಿಕಾರವು ಅರಣ್ಯ ಇಲಾಖೆಗೆ ಹಣ ಬಿಡುಗಡೆ ಮಾಡಿದ್ದು, ಇನ್ನು 1.66 ಕೋಟಿ ರೂ. ನೀಡಬೇಕಿದೆ.ಅರಣ್ಯ ಇಲಾಖೆಯ ಈ ಕ್ರಮಕ್ಕೆ ಬರದನಾಡ ಪರಿಸರ ಪ್ರೇಮಿಗಳು ಫುಲ್ ಖುಷ್ ಅಗಿದ್ದು, ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.