ವಿಜಯಪುರ: ಆರ್‍ಡಿಎಕ್ಸ್ ಬ್ಲಾಸ್ಟ್ ಆಗಿ ವೀರ ಮರಣ ಹೊಂದಿದ್ದ ಯೋಧ ಶ್ರೀಶೈಲ ರಾಯಪ್ಪ ಬಳಬಟ್ಟಿ (34) ಅವರ ಅಂತ್ಯಕ್ರಿಯೆ ಇಂದು ಮುದ್ದೇಬಿಹಾಳ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ನಡೆಯಿತು.
ಶ್ರೀಶೈಲ ಬಳಬಟ್ಟಿ ಅವರು 12 ವರ್ಷದ ಹಿಂದೆ ಸೇನೆಗೆ ಸೇರಿದ್ದು, 12ನೇ ಮದ್ರಾಸ್ ಇನ್‍ಫ್ಯಾಂಟ್ರಿ ರೆಜಿಮೆಂಟ್‍ನಲ್ಲಿ ಯೋಧರಾಗಿದ್ದರು. ಶ್ರೀಶೈಲ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಬಳಬಟ್ಟಿ ಗ್ರಾಮದ ಕಿರಿಯ ಆರೋಗ್ಯ ಸಹಾಯಕ ಕಚೇರಿ ಆವರಣದ ಎದುರು ಸಕಲ ಸರ್ಕಾರಿ ಗೌರವಗಳೊಂದಿಗೆ ಅಧಿಕಾರಿಗಳು ಅಂತ್ಯಕ್ರಿಯೆ ನಡೆಸಿದರು.
ಜಮ್ಮುಕಾಶ್ಮೀರದ ಪೋಂಚ್ ಜಿಲ್ಲೆಯ ರಜೌರಿಯಲ್ಲಿ ಮೇ 22ರಂದು ಆರ್‍ಡಿಎಕ್ಸ್ ಬ್ಲಾಸ್ಟ್ ಆಗಿ ಶ್ರೀಶೈಲ ಅವರು ಮೃತಪಟ್ಟಿದ್ದರು. ಈ ಕುರಿತು ಸೇನಾಧಿಕಾರಿಗಳು ಶ್ರೀಶೈಲ್ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಶ್ರೀಶೈಲ ಅವರ ಪಾರ್ಥೀವ ಶರೀರ ಇಂದು ಬೆಳಗ್ಗೆ ಸ್ವಗ್ರಾಮಕ್ಕೆ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವೀರ ಯೋಧನ ಮೃತ ದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಂಬಂಧಿಕರು, ಗ್ರಾಮಸ್ಥರು, ಸುತ್ತಮುತ್ತಲಿಯ ಗ್ರಾಮದವರು ಬಂದು ಶ್ರೀಶೈಲ ಅವರಿಗೆ ನಮನ ಸಲ್ಲಿಸಿದರು. ಗ್ರಾಮದಲ್ಲಿ ಮೆರವಣಿಗೆ ಮಾಡಿದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.