– ಅಕ್ಕನ ಮನೆಗಾಗಿ ಜೀವಸವೆಸಿದ್ದ ತಂಗಿ
– ಅನಾಥ ಶವಗಳೆಂದು ಅಂತ್ಯಸಂಸ್ಕಾರ
ವಿಜಯಪುರ: ಸಾಕಿದ ಅಕ್ಕನ ಮಗಳೇ ದಿನಬೆಳಗಾದರೆ ಅಣುಕಿನ ಮಾತನಾಡುತ್ತಾಳೆ ಎಂದು ಬೇಸರಗೊಂಡು ಮಹಿಳೆಯೋರ್ವಳು ತನ್ನ ವಯಸ್ಕ ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮೂಲತಃ ಬಾಗಕೋಟೆ ಜಿಲ್ಲೆ ಮಧೋಳ ತಾಲೂಕಿನ ಮಳಲಿ ನಿವಾಸಿಯಾದ ತಾಯಿ ರೇಣುಕಾ ಹವಾಲ್ದಾರ (45), ಮಗಳು ಐಶ್ವರ್ಯ ಹವಾಲ್ದಾರ(23), ಮಗ ಅಖಿಲೇಶ ಹವಾಲ್ದಾರ(18) ಎಂದು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂಕಿನ ಕೃಷ್ಣಾ ಸೇತುವೆ ಮೇಲಿನಿಂದ ತನ್ನೆರಡು ಮಕ್ಕಳೊಂದಿಗೆ ನದಿಗೆ ಹಾರಿ ಪ್ರಾಣಬಿಟ್ಟಿದ್ದಾರೆ.
Advertisement
Advertisement
ರೇಣುಕಾ ತನ್ನ ಗಂಡ ಅಶೋಕನೊಂದಿಗೆ ಚೆನ್ನಾಗಿ ಜೀವನ ನಡೆಸುತ್ತಿದ್ದರು. ಆದರೆ ಕಳೆದ ಹಲವು ವರ್ಷಗಳಿಂದ ತನ್ನ ಅಕ್ಕ ಉಷಾಳಿಗೆ ಮಹಾಮಾರಿ ಕ್ಯಾನ್ಸರ್ ಕಾಯಿಲೆ ಬಂದಿದೆ ಎಂದು ಗೊತ್ತಾಗಿತ್ತು. ಹಾಗಾಗಿ ಆಕೆಯನ್ನು ಆರೈಕೆ ಮಾಡಲೆಂದು ರೇಣುಕಾ ತನ್ನ ಪತಿ ಅಶೋಕನನ್ನು ಮಳಲಿಯಲ್ಲೇ ಬಿಟ್ಟು ತನ್ನೆರಡು ಮಕ್ಕಳೊಂದಿಗೆ ವಿಜಯಪುರದಲ್ಲಿರುವ ಅಕ್ಕನ ಮನೆಗೆ ಬಂದಿದ್ದಳು. ಆದರೆ ಕಾಲನ ಕೆರೆಗೆ ಓಗೊಟ್ಟು ಅಕ್ಕ ವಿಧಿವಶರಾಗಿದ್ದರು. ಆ ಬಳಿಕ ಅಕ್ಕನ ಮಗಳು ದೀಪಾ ಮತ್ತು ಅಕ್ಕನ ಗಂಡ ನಾರಾಯಣ ಅವರನ್ನು ನೋಡುವವರು ಯಾರೂ ಇಲ್ಲ ಎಂದು ಅವರ ಆರೈಕೆಯಲ್ಲಿ ತೊಡಗಿಕೊಂಡರು. ಕಾಲಕ್ರಮೇಣ ಕಳೆದ ಮೂರು ವರ್ಷಗಳ ಹಿಂದೆ ಅಕ್ಕನ ಗಂಡ ನಾರಾಯಣ ಸಹ ಅನಾರೋಗ್ಯದಿಂದ ಮೃತಪಟ್ಟಿದ್ದರು.
Advertisement
Advertisement
ಇದಾದ ನಂತರ ಮನೆಯಲ್ಲಿ ಕಲಹ ಶುರುವಾಗಿತ್ತು. ಎಲ್ಲಿಂದಲೋ ಬಂದು ನಮ್ಮ ಮನೆಯಲ್ಲೇ ಉಳಿದುಕೊಂಡು ನೀವು ನಮ್ಮ ಹಂಗಿನಲ್ಲಿ ಜೀವನ ನಡೆಸುತ್ತಿದೀರಾ ಎಂದು ಅಕ್ಕನ ಮಗಳು ಮತ್ತು ಮನೆಯವರು ಹಂಗಿಸಿದ್ದಾರೆ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಫೆಬ್ರುವರಿ 16 ರಂದು ರೇಣುಕಾ ತನ್ನ ಇಬ್ಬರು ಮಕ್ಕಳಾದ ಐಶ್ವರ್ಯ ಹಗೂ ಅಖಿಲೇಶರೊಂದಿಗೆ ಮನೆಬಿಟ್ಟು ತೆರಳಿದ್ದರು. ನಂತರ ರೇಣುಕಾ ಸಹೋದರ ವಿಲಾಸ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದರ ಬಗ್ಗೆ ಮಾಹಿತಿ ನೀಡಿದ್ದರು.
ವಿಜಯಪುರ ಜಿಲ್ಲೆಯ ಕೋಲ್ಹಾರ ಸೇತುವೆಯ ಕೃಷ್ಣಾ ನದಿಯಲ್ಲಿ ಫೆಬ್ರುವರಿ 19 ರಂದು ಒಂದು ಮಹಿಳೆಯ ಶವ ಪತ್ತೆಯಾಗಿದೆ. ತದ ನಂತರ 25 ರಂದು ಯುವತಿ ಮತ್ತು ಯುವಕನ ಶವ ಪತ್ತೆಯಾಗಿದೆ. ಆದರೆ ಕೊಲ್ಹಾರ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇರದ ಕಾರಣ ಅನಾಥ ಶವಗಳೆಂದು ಭಾವಿಸಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನರವೇರಿಸಿ ಬಿಟ್ಟಿದ್ದಾರೆ. ತದನಂತರ ಗಾಂಧಿ ಚೌಕ್ ಪೊಲೀಸರು ಶಂಕೆ ವ್ಯಕ್ತಪಡಿಸಿ, ರೇಣುಕಾ ಸಹೋದರ ವಿಲಾಸರನ್ನು ಒಂದು ಬಾರಿ ಶವಗಳ ಸಾಮಗ್ರಿಗಳನ್ನು ನೋಡಿ ಗುರುತಿಸಲು ಹೇಳಿದ್ದಾರೆ. ಆಗ ವಿಲಾಸ ಅವರು ರೇಣುಕಾ ಸೀರೆ ಮತ್ತು ಮಕ್ಕಳ ಉಡುಪು ಮತ್ತು ಉಂಗುರ ನೋಡಿ ಗುರುತಿಸಿದ್ದಾರೆ.
ಹಲವು ವರ್ಷಗಳ ಕಾಲ ಅಕ್ಕನ ಆರೈಕೆ, ಅಕ್ಕನ ಮಗಳ ಹಾಗೂ ಅಕ್ಕನ ಗಂಡನ ಪೋಷಣೆ ಮಾಡುತ್ತ ಬಂದ ರೇಣುಕಾಳಿಗೆ ಇದೀಗ ತಿರಸ್ಕಾರದ ಮಾತುಗಳನ್ನು ಕೇಳಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಕೋಲ್ಹಾರ-ಕೊರ್ತಿ ಸೇತುವೆಯಿಂದ ಜಿಗಿದು ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಕುಟುಂಬಸ್ಥರಿಗೆ ತಿಳಿದಿದೆ. ತನ್ನೆರಡು ಮಕ್ಕಳು ವಯಸ್ಕರಿದ್ದರೂ ಸಹ ಅದ್ಯಾಕೆ ಇಂತಹ ಕಟು ನಿರ್ಧಾರ ಮಾಡಿದಳು ಎಂದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಆಂತರಿಕ ಕಲಹ ಏನೇ ಇದ್ರೂ ಸಹ ಮಾತನಾಡಿ ಪರಿಹರಿಸಿಕೊಳ್ಳಬಹುದಿತ್ತು. ಆದರೆ ತಾನು ಪ್ರಾಣ ಕಳೆದುಕೊಳ್ಳುವುದರ ಜೊತೆಗೆ ಎರಡು ಮಕ್ಕಳನ್ನು ಆತ್ಮಹತ್ಯೆ ಮಾಡುವಂತೆ ಮಾಡಲು ಅಂತಹದ್ದು ಏನಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.