ಮಂಗಳೂರು: ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddeshwara Swamiji), ವಿಜಯಪುರದ ಜೀವಂತ ದೇವರು ಎಂದೇ ಪ್ರಸಿದ್ಧರಾದವರು. ಅವರ ಅಗಲುವಿಕೆಯು ನಾಡಿಗೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿನ ಅವರ ಅಪಾರ ಭಕ್ತಸಮೂಹಕ್ಕೆ ಆಘಾತವನ್ನು ಉಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ (Nalin Kumar Kateel) ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
Advertisement
ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ದೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ ಆಗಿದ್ದರು. ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಟಾಂತರಾಗಿದ್ದರು. ಒಬ್ಬ ಜ್ಞಾನಯೋಗಿಗಳ ರೂಪದಲ್ಲಿ ಅವರು ಮುಂದೆಯೂ ನಮ್ಮೊಂದಿಗೆ ಇರುತ್ತಾರೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರವಾಗಿದೆ. ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ದೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದವರು. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಿದ್ದರು. ಸೂಜಿಗಲ್ಲಿನಂತಹ ಸೆಳೆತ, ಅವರು ಭಾಷೆ, ಧಾಟಿ, ಪದಪ್ರಯೋಗ, ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುತ್ತಿದ್ದರು ಎಂದು ವಿವರಿಸಿದ್ದಾರೆ. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ದಾಸ ವಾಣಿಯಂತೆ ಅವರು ನಡೆದವರು ಎಂದಿದ್ದಾರೆ. ಇದನ್ನೂ ಓದಿ: ನಮ್ಮನೆಯಲ್ಲಿ ಕುರಾನ್ ಜೊತೆಗೆ ಶ್ರೀಗಳ ಆಶೀರ್ವಚನ ಕೇಳುತ್ತಿದ್ದೆವು: ಮುಸ್ಲಿಂ ಭಕ್ತರು
Advertisement
ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಞಾನವನ್ನು ಬಳಸಿಕೊಂಡು ಬೋಧಪ್ರದ ಪ್ರವಚನಗಳನ್ನು ನೀಡುತ್ತಿದ್ದರು. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯವಾಗಿತ್ತು. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತಿದ್ದವು. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ.
ಅವರು ವಚನಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದವರು. ಅವರು ಜೀವನವನ್ನು ಆಧ್ಯಾತ್ಮಿಕತೆಗೆ ಮೀಸಲಿಟ್ಟಿದ್ದಾರೆ ಮತ್ತು ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳು ನಮಗೆ ಮಾರ್ಗದರ್ಶನ ನೀಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಅನ್ನು ನಯವಾಗಿಯೇ ನಿರಾಕರಿಸಿದ್ದು ಅವರ ಶ್ರೇಷ್ಠ ವ್ಯಕ್ತಿತ್ವಕ್ಕೆ ಕೈಗನ್ನಡಿ ಎಂದು ಅವರು ತಿಳಿಸಿದ್ದಾರೆ.