ವಿಜಯಪುರ: ಯಾವ ಮಿಣಿಮಿಣಿ ಪೌಡ್ರೋ? ಯಾವ ಹೊಸ ಸಂಶೋಧನೆಯೋ ನನಗೆ ಅರ್ಥವಾಗುತ್ತಿಲ್ಲ. ಪಾಂಡ್ಸ್ ಕಂಪನಿ ಪೌಡರನ್ನೇ ಮಿಣಿಮಿಣಿ ಪೌಡರ್ ಸೈಡು ಹೊಡೆದಿದೆ. ಎಲ್ಲರ ಬಾಯಲ್ಲೂ ಅದೇ ಇದೆ, ಟಿಕ್ ಟಾಕ್ ನಲ್ಲೂ, ಎಲ್ಲೆಲ್ಲೂ ಮಿಣಿಮಿಣಿ ಪೌಡರ್ ಇದೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್‍ಡಿಕೆಯನ್ನು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದರು.
ಸಿಎಂ ವಿದೇಶ ಪ್ರವಾಸದಿಂದ ವಾಪಸ್ ಆದ ಹಿನ್ನೆಲೆ ಭೇಟಿ ಮಾಡಿ ಶುಭ ಕೋರಿ ಬಂದಿದ್ದೇನೆ. 15 ದಿನದಲ್ಲಿ ಸಿಎಂ ವಿಜಯಪುರಕ್ಕೆ ಬರಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗಲೇಬೇಕು. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಸಿ.ಸಿ. ಪಾಟೀಲ್ ಅವರನ್ನು ಬಲಿಕೊಟ್ಟು ನಾನು ಸಚಿವನಾಗಲು ಬಯಸುವುದಿಲ್ಲ. ರಾಜೀನಾಮೆ ನೀಡಿ ಬಿಜೆಪಿ ಸೇರಿರುವ 17 ಜನರಲ್ಲಿ ಕೆಲವರಿಗೆ ಡಿಸಿಎಂ, ಸಚಿವ ಸ್ಥಾನ, ನಿಗಮ ಮಂಡಳಿ ಸ್ಥಾನಮಾನ ನೀಡಲು ಮಾತುಕತೆಯಾಗಿದೆ. ಆ ರೀತಿ ಆಗುವ ವಿಶ್ವಾಸವಿದೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ನೀಡಬೇಕೆಂಬುದು ಸಹಜ ಬಯಕೆ ಇದೆ ಎಂದು ರಮೇಶ್ ಪರ ಬ್ಯಾಟ್ ಬೀಸಿದರು. ಇನ್ನು ಕೆಲವರು ಬಹಳ ಲಾಭ ಅನುಭವಿಸಿದ್ದಾರೆ. ಅವರು ತ್ಯಾಗ ಮಾಡಬೇಕು. ಕೇವಲ ಭಾಷಣ ಮಾಡಬಾರದು. ರಾಜ್ಯದಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿದರು ತಮ್ಮ ಸಚಿವ ಸ್ಥಾನ ಬಿಟ್ಟು ಕೊಡಬೇಕು ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಸಚಿವ ಸ್ಥಾನ ಬಿಡುವಂತೆ ಯತ್ನಾಳ ಸಲಹೆ ನೀಡಿದರು. ಡಿಸಿಎಂ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದರಿಂದ ಗೌರವ ಕಡಿಮೆಯಾಗಲಿದೆ. ವೈಯಕ್ತಿಕವಾಗಿ ನನಗೆ ಅದು ಸರಿ ಅನಿಸುವುದಿಲ್ಲ ಎಂದು ಹೇಳಿದರು.
ಹೈಕಮಾಂಡ್ ಮತ್ತು ಸಚಿವರು ಪ್ರತಿ ಮೂರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ಮಾಡಲಿ. ಅವರಿಗೆ ನೀಡಿರುವ ಗುರಿಯ ಅವಲೋಕನ ಮಾಡಬೇಕು. ಇಲ್ಲದಿದ್ದರೆ ಕೇವಲ ಗೂಟದ ಕಾರು, ಗನ್ ಮ್ಯಾನ್ ಇಟ್ಟುಕೊಂಡಂತಾಗುತ್ತದೆ. ಕೆಲವು ಸಚಿವರು ವಿಧಾನಸೌಧಕ್ಕೆ ಸೀಮಿತರಾಗಿದ್ದಾರೆಂದು ಕಿಡಿಕಾರಿದರು.
ನನಗೆ ಸಚಿವ ಸ್ಥಾನ ನೀಡಿದರೆ ಕ್ಯಾಬಿನೆಟ್ ಸ್ಥಾನವನ್ನೇ ನೀಡಬೇಕು. ಸಣ್ಣಪುಟ್ಟ ಸ್ಥಾನಮಾನ ಒಪ್ಪಲ್ಲ, ನೀಡದಿದ್ದರೆ ಶಾಸಕನಾಗಿ ಮುಂದುವರಿಯುತ್ತೇನೆ ಎಂದರು. ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ನನಗೆ ಸ್ಥಾನ ಕೊಡುವುದಾದರೆ ಸಂಪುಟದಲ್ಲೇ ಸ್ಥಾನ ಕೊಡಬೇಕು. ವಿಜಯಪುರ ಜಿಲ್ಲಾ ಉಸ್ತುವಾರಿ ಕೊಡಬೇಕು. ನನಗೆ ಸಚಿವ ನೀಡುವ ವಿಚಾರ ಮುನ್ನೆಲೆಗೆ ಬಂದ್ರೆ ಎರಡು ನಿಯೋಗ ಹೋಗುತ್ತೆ. ಯತ್ನಾಳ್‍ಗೆ ಸಚಿವ ಸ್ಥಾನ ನೀಡಬೇಡಿ ಎಂದು ದೆಹಲಿ ಹಾಗೂ ಬೆಂಗಳೂರಿಗೆ ಎರಡು ನಿಯೋಗ ಹೋಗುತ್ತೆ ಎನ್ನುವ ಮೂಲಕ ಪರೋಕ್ಷವಾಗಿ ಸಂಸದ ರಮೇಶ್ ಜಿಗಜಿಣಗಿ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು.