ವಿಜಯಪುರ: ಕೈ ನಾಯಕಿ ರೇಷ್ಮಾ ಪಡೇಕನೂರ ಕೊಲೆ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದಾಗ ವಿಜಯಪುರ ಜಿಲ್ಲಾ ಪೊಲೀಸರೊಬ್ಬರು ಮಹಾರಾಷ್ಟ್ರದ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪವಿಭಾಗದ ರೈಟರ್ ಮಲ್ಲಿಕಾರ್ಜುನ ಪೂಜಾರಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರಿಯಾಜ್ ಕೊಕಟನೂರ್ ಎಂಬವರಿಂದ ಒಂದು ಲಕ್ಷ ರೂ. ಲಂಚ ಪಡೆಯುವಾಗ ಸೋಲಾಪುರ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೌಫಿಕ್ ಪೈಲ್ವಾನ್ ಕುಟುಂಬಸ್ಥರಿಗೆ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ವರಗೌಡ ಹಾಗೂ ರೈಟರ್ ಪೂಜಾರಿ ಒಟ್ಟು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ನಂತರ ರಿಯಾಜ್ ಎಂಬ ಮಧ್ಯವರ್ತಿ ಮೂಲಕ 1.5 ಲಕ್ಷ ರೂ.ಗೆ ಈ ವ್ಯವಹಾರ ಕುದುರಿಸಿದ್ದನಂತೆ ಎಂದು ಹೇಳಲಾಗಿದೆ.
ಇದಕ್ಕೆ ಒಪ್ಪಿದ್ದ ಪೈಲ್ವಾನ್ ಕುಟುಂಬಸ್ಥರು 1 ಲಕ್ಷ ನೀಡಲು ಒಪ್ಪಿದ್ದರಂತೆ. ಈ ಲಂಚದ ಹಣ ಪಡೆಯಲು ಬಂದಾಗ ನಿನ್ನೆ ರಾತ್ರಿ ಸೋಲಾಪುರ ಎಸಿಬಿ ಅಧಿಕಾರಿಗಳು ಪೂಜಾರಿ ಹಾಗೂ ರಿಯಾಜ್ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಡಿವೈಎಸ್‍ಪಿ ಮಹೇಶ್ವರಗೌಡರನ್ನು ಬಂಧಿಸಲು ಒಂದು ತಂಡವನ್ನು ವಿಜಯಪುರಕ್ಕೆ ಕಳುಹಿಸಿರುವುದಾಗಿ ಎಸಿಬಿ ಅಧಿಕಾರಿ ಅಜಿತ್ ಜಾಧವ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.