ವಿಜಯಪುರ: ಕನ್ನಡ ನೆಲದಲ್ಲಿ ಅಧಿಕಾರ ಬೇಕು, ಆದ್ರೆ ಕಾರ್ ಮಾತ್ರ ಮಹಾರಷ್ಟ್ರದ್ದು ಬೇಕು. ವಿಜಯಪುರದ ಮೇಯರ್ ಹಾಗೂ ಉಪ ಮೇಯರ್ ಮಹಾರಾಷ್ಟ್ರ ನೋಂದಣಿಯ ಕಾರ್‍ಗಳನ್ನು ಬಳಸುತ್ತಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿಯ ಮೇಯರ್ ಸಂಗೀತಾ ಪೋಳ್ ಹಾಗೂ ಜೆಡಿಎಸ್‍ನ ಉಪಮೇಯರ್ ರಾಜೇಶ್ ದೇವಗಿರಿ ಅಧಿಕಾರದ ಗದ್ದುಗೆ ಏರಿದಾಗಿನಿಂದ ಮಹಾರಾಷ್ಟ್ರ ಪಾಸಿಂಗ್ ಕಾರ್ ಗಳನ್ನೇ ಬಳಸುತ್ತಿದ್ದಾರೆ. ಕನ್ನಡಿಗರ ಕಾರ್ ಇರುವಾಗ ಮಹಾರಾಷ್ಟ್ರ ಪಾಸಿಂಗ್‍ನ ಕಾರ್ ಬಳಸೋದಕ್ಕೆ ಪಾಲಿಕೆಯ ಕೆಲ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕಾರ್ ನ ಟೆಂಡರ್ ಪ್ರಕ್ರಿಯೆ ಪಾಲಿಕೆಯ ಮಟ್ಟದಲ್ಲೇ ನಡೆದಿದೆ. ಮಹರಾಷ್ಟ್ರದ ಕಾರುಗಳನ್ನೇ ಬಳಸೋದರಲ್ಲಿ ಭ್ರಷ್ಟಾಚಾರ ನಡೆದಿದೆ. ಕಮಿಷನ್ ಆಸೆಗಾಗಿ ಮೇಯರ್ ಹಾಗೂ ಉಪಮೇಯರ್ ನಾಡದ್ರೋಹ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಹಾರಾಷ್ಟ್ರದ ಕಾರ್ ಬಳಸುತ್ತಿರೋದಕ್ಕೆ ಸದಸ್ಯರಾದ ಮೈನುದುನ್ ಬೀಳಗಿ, ರವೀಂದ್ರ ಲೋನಿ ಮತ್ತು ಪರಶುರಾಮ ರಜಪೂತ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ತಕರಾರು ತೆಗೆದಿದ್ದಾರೆ. ಇನ್ನು ಕಾರ್ ನ ಟೆಂಡರ್ ಪ್ರಕ್ರಿಯೆ ಬಗ್ಗೆ ಪಾಲಿಕೆ ಕಮಿಷನರ್ ಹರ್ಷ ಶೆಟ್ಟಿಗೆ ಯಾವುದೇ ಮಾಹಿತಿ ಇರಲಿಲ್ವಂತೆ. ಪರಿಶೀಲನೆ ಮಾಡಿ ಕ್ರಮಕೈಗೊಳ್ಳೊದಾಗಿ ಅವರು ಹೇಳಿದ್ದಾರೆ. ವಿಪರ್ಯಾಸ ಎಂದರೆ ಮಹಾರಾಷ್ಟ್ರದ ಕಾರ್ ಬಗ್ಗೆ ಚಕಾರ ಎತ್ತಿದ್ದಕ್ಕೆ ಪಾಲಿಕೆ ಸದಸ್ಯರ ವಿರುದ್ಧ ಪಾಲಿಕೆ ಅಧಿಕಾರಿ ಜಗದೀಶ ಎಂಬವರು ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಜಲನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.