Lok Sabha 2024: ಬಿಜೆಪಿ ಭದ್ರಕೋಟೆ ಒಡೆಯುತ್ತಾ ‘ಕೈ’?

Public TV
5 Min Read
Vijayapura

– ಬಿಜೆಪಿಗೆ ಮೋದಿ ನಾಮಬಲದ ಜೊತೆ ಮೈತ್ರಿ ಶಕ್ತಿ
– ಕಾಂಗ್ರೆಸ್‌ನಿಂದ ಟಿಕೆಟ್‌ ಗಿಟ್ಟಿಸಿದ ರಾಜು ಆಲಗೂರ

ವಿಜಯಪುರ: ಎಲ್ಲಾ ಮುಂಚೂಣಿಯ ಪಕ್ಷಗಳಿಗೂ ಅವಕಾಶ ನೀಡಿರುವ ಗುಮ್ಮಟ ನಗರಿ ವಿಜಯಪುರ (Vijayapura) ಕ್ಷೇತ್ರ ಮತ್ತೆ ಲೋಕಸಭಾ (Lok Sabha Elections 2024) ಅಖಾಡಕ್ಕೆ ಸಜ್ಜಾಗಿದೆ. ಮೂರು-ನಾಲ್ಕು ದಶಕದ ಹಿಂದೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪ್ರಬಲವಾಗಿದ್ದರೂ, ಈ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುವಲ್ಲಿ ವಿಫಲವಾಗಿತ್ತು. ಕಾಂಗ್ರೆಸ್, ಐಎನ್‌ಡಿ, ಎಸ್‌ಡಬ್ಲ್ಯೂಎ, ಜೆಎನ್‌ಪಿ, ಜೆಡಿ, ಬಿಜೆಪಿ ಹೀಗೆ ಎಲ್ಲಾ ಪಕ್ಷಗಳಿಗೂ ಕ್ಷೇತ್ರ ಮಣೆ ಹಾಕಿದೆ. ಆದರೆ ಕಳೆದ 5 ಚುನಾವಣೆಗಳಿಂದ ನಿರಂತರವಾಗಿ ಬಿಜೆಪಿಗೆ ಜನ ಗೆಲುವಿನ ಹಾರ ಹಾಕಿದ್ದಾರೆ.

ಕ್ಷೇತ್ರದ ಪರಿಚಯ
ವಿಜಯಪುರ ಕ್ಷೇತ್ರವನ್ನು 1951-67 ರ ವರೆಗೆ ಬಿಜಾಪುರ ಉತ್ತರ ಲೋಕಸಭಾ ಕ್ಷೇತ್ರವೆಂದು ಕರೆಯಲಾಗಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) 9 ಬಾರಿ ಹಾಗೂ ಬಿಜೆಪಿ (BJP) 5 ಬಾರಿ ಜಯಗಳಿಸಿದೆ. ಕ್ಷೇತ್ರವು 2008 ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಇದನ್ನೂ ಓದಿ: Lok Sabha 2024: ಬೀದರ್‌ನಲ್ಲಿ ಬಿಜೆಪಿಗೆ ಮೈತ್ರಿ ಬಲ?- ಕಾಂಗ್ರೆಸ್‌ಗೆ ವರವಾಗುತ್ತಾ ‘ಕಮಲ’ ಟಿಕೆಟ್ ಒಳಜಗಳ?

Vijayapura 2

ಬಿಜೆಪಿ ಭದ್ರಕೋಟೆ ವಿಜಯಪುರ
ವಿಜಯಪುರ ಲೋಕಸಭಾ ಮತಕ್ಷೇತ್ರ ಮೊಟ್ಟಮೊದಲಿಗೆ ಜನತಾದಳ, ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದ್ರೆ ಕಳೆದ 25 ವರ್ಷಗಳಿಂದ ಮತಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. 2009 ರ ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಆಯ್ಕೆ ಆಗುವ ಮೂಖಾಂತರ ಮೊಟ್ಟಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಮತಕ್ಷೇತ್ರ ಬಿದ್ದಿತ್ತು. ನಂತರ 2004 ರಲ್ಲೂ ಯತ್ನಾಳ್ ಜಯಭೇರಿ ಬಾರಿಸಿ ಬಿಜೆಪಿ ವಶವಾಯ್ತು. ನಂತರ 2009 ರಲ್ಲಿ ವಿಜಯಪುರ ಲೋಕಸಭಾ ಮತಕ್ಷೇತ್ರ ಮೀಸಲು ಕ್ಷೇತ್ರವಾಯ್ತು. ಆಗ ರಮೇಶ ಜಿಗಜಿಣಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿ ಮತ್ತೆ ಬಿಜೆಪಿ ತನ್ನ ಭದ್ರಕೊಟೆ ಉಳಿಸಿಕೊಂಡಿತು. ಅದೇ ರೀತಿ 2014, 2019 ರಲ್ಲೂ ರಮೇಶ ಜಿಗಜಿಣಗಿ (Ramesh Jigajinagi) ಗೆಲುವು ಸಾಧಿಸುತ್ತಾ ಬಿಜೆಪಿಯ ಭದ್ರಕೋಟೆಯನ್ನಾಗಿ ಮುಂದುವರೆಸಿದ್ದಾರೆ.

8 ವಿಧಾನಸಭೆ ಕ್ಷೇತ್ರಗಳು
ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇವೆ. ವಿಜಯಪುರ ನಗರ, ಇಂಡಿ, ಬಬಲೇಶ್ವರ, ಸಿಂದಗಿ, ದೇವರಹಿಪ್ಪರಗಿ, ಬಸವನ ಬಾಗೇವಾಡಿ, ನಾಗಠಾಣ (ಮೀಸಲು), ಮುದ್ದೇಬಿಹಾಳ.

vijayapura lok sabha map

ಒಟ್ಟು ಮತದಾರರು
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಮತದಾರರು (22-01-24)
19,19,048 ಇದ್ದಾರೆ. ಅದರಲ್ಲಿ 9,76,073 ಪುರುಷರು, 9,42,757 ಮಹಿಳಾ ಮತದಾರರು ಇದ್ದಾರೆ. 218 ಇತರೆ ಮತದಾರರಿದ್ದಾರೆ. ಇದನ್ನೂ ಓದಿ: Lok Sabha 2024: ಉಡುಪಿ-ಚಿಕ್ಕಮಗಳೂರು ಟಿಕೆಟ್‌ ಗಿಟ್ಟಿಸಿ ಹ್ಯಾಟ್ರಿಕ್‌ ನಗೆ ಬೀರ್ತಾರಾ ಕರಂದ್ಲಾಜೆ?

ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಗಿತ್ತು. ಕಾರಣ ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಜೆಡಿಎಸ್‌ನಿಂದ ಡಾ. ಸುನಿತಾ ಚವ್ಹಾಣ ಕಣಕ್ಕಿಳಿದಿದ್ದರು. ಇನ್ನು ಬಿಜೆಪಿಯಿಂದ ರಮೇಶ ಜಿಗಜಿಣಗಿ ಕಣದಲ್ಲಿದ್ದರು. ರಮೇಶ ಜಿಗಜಿಣಗಿ 2,56,526 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಆಡಳಿದಲ್ಲಿದ್ದರೂ, ಭಾರಿ ಮತಗಳ ಅಂತರದಲ್ಲಿ ಬಿಜೆಪಿ ತನ್ನ ಭದ್ರಕೋಟೆಯನ್ನ ಉಳಿಸಿಕೊಂಡಿತ್ತು.

MP Ramesh Jigajinagi

ಈ ಬಾರಿಯ ಆಕಾಂಕ್ಷಿಗಳು
2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇತ್ತು. ಆದರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಇದೆ. ಸಹಜವಾಗಿಯೇ ಬಿಜೆಪಿಯಲ್ಲಿ ಹಾಲಿ ಸಂಸದರು ಇದ್ದರೂ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ನಾಗಠಾಣ ಮತಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ್ ನಾಯಕ್ ಈ ಬಾರಿ ಲೋಕಸಭೆಯಿಂದಾದ್ರೂ ಸ್ಪರ್ಧೆಗೆ ಇಳಿಯಲು ಭಾರಿ ಕಸರತ್ತು ನಡೆಸಿದ್ದಾರೆ. ಜೊತೆಗೆ ಜಿಲ್ಲಾ ವೈದ್ಯಕೀಯ ಪ್ರಕೋಷ್ಠಕದ ಜಿಲ್ಲಾ ಸಂಚಾಲಕ ಡಾ. ಬಾಬು ರಾಜೇಂದ್ರ ನಾಯಕ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಇನ್ನು ಕಳೆದ ಬಾರಿಯ ಮೈತ್ರಿ ಅಭ್ಯರ್ಥಿಯಾಗಿದ್ದ ಡಾ. ಸುನೀತಾ ಚವ್ಹಾಣ ಕೂಡ ಈ ಬಾರಿಯ ಮೈತ್ರಿ ಅಭ್ಯರ್ಥಿಯಾಗಲು ಸಿದ್ಧವಾಗಿದ್ದಾರೆ.

ರಾಜು ಆಲಗೂರಗೆ ‘ಕೈ’ ಟಿಕೆಟ್‌
ಕಾಂಗ್ರೆಸ್‌ನಿಂದ ಹಾಲಿ ಎಂಎಲ್‌ಸಿ ಆಗಿರುವ ಪ್ರಕಾಶ್ ರಾಠೋಡ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿಯಾದ ರಾಜಶೇಖರ ಯಡಹಳ್ಳಿ, ಕಾಂತಾ ನಾಯಕ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ (Raju Algur) ಅವರಿಗೆ ‘ಕೈ’ ಟಿಕೆಟ್‌ ಒಲಿದು ಬಂದಿದೆ. ರಾಜು ಅವರು ಜಿಲ್ಲೆಯಲ್ಲಿ ಪ್ರಬಲವಾಗಿರುವ ಬಲಗೈ (ಚಲುವಾದಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ.

raju algur vijayapura

ಮತಕ್ಷೇತ್ರದಲ್ಲಿ ಪಾರುಪತ್ಯ
ವಿಜಯಪುರ ಲೋಕಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಹಾಲಿ ಸಂಸದ ರಮೇಶ ಜಿಗಜಿಣಗಿ ಆಗಲಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗಲಿ ಯಾರ ಪಾರುಪತ್ಯವೂ ನಡೆಯುವುದಿಲ್ಲ. ಈ ಚುನಾವಣೆಯಲ್ಲಿ ಏನಿದ್ರೂ ಮೋದಿ ನೋಡಿ ಮಾತ್ರ ಮತದಾರರು ವೋಟ್ ಹಾಕೋದು. ಕಾರಣ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪಾರುಪತ್ಯ ಮಾತ್ರ. ಅದೇ ರೀತಿ ಕಾಂಗ್ರೆಸ್‌ನಲ್ಲೂ ಕೂಡ ಯಾರದೇ ಪಾರುಪತ್ಯ ಲೆಕ್ಕಕ್ಕಿಲ್ಲ. ಕೇವಲ ಪ್ರಧಾನಿ ಅಭ್ಯರ್ಥಿ ಮೇಲೆ ಮತ ಚಲಾವಣೆ ಆಗುತ್ತೆ. ಇದನ್ನೂ ಓದಿ: Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ

ಮೈತ್ರಿಯಿಂದ ಬಿಜೆಪಿಗೆ ಲಾಭ?
ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದೆ. ಆದ್ರೆ ಇದರಿಂದ ಮತಕ್ಷೇತ್ರದ ಬಿಜೆಪಿಗೆ ಲಾಭವೇನಿಲ್ಲ. ಆದ್ರೆ ಮತಗಳ ಅಂತರ ಜಾಸ್ತಿ ಆಗುತ್ತೆ ಅಷ್ಟೆ. ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಪಾರುಪತ್ಯವೇ ಜಾಸ್ತಿ ಇದೆ. ಕಾರಣ ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಾಗಲೇ 2.5 ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆದ್ದಿದೆ. ಜಿಡಿಎಸ್ ಮೈತ್ರಿಯಿಂದ ಯಾವುದೇ ಲಾಭವಿಲ್ಲ. ಆದರೆ ಮೈತ್ರಿ ಹಿನ್ನೆಲೆ ಮತಕ್ಷೇತ್ರ ಜೆಡಿಎಸ್ ಪಾಲಾದ್ರೆ ಜೆಡಿಎಸ್‌ಗೆ ಅಭ್ಯರ್ಥಿ ಸಾಕಷ್ಟು ಲಾಭವಾಗಲಿದೆ.

BJP JDS Modi Amit Shah Kumaraswamy

ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
2009: ರಮೇಶ ಜಿಗಜಿಣಗಿ – ಬಿಜೆಪಿ (42,404 ಗೆಲುವಿನ ಅಂತರ)
2014: ರಮೇಶ ಜಿಗಜಿಣಗಿ – ಬಿಜೆಪಿ (69,819 ಗೆಲುವಿನ ಅಂತರ)
2019: ರಮೇಶ ಜಿಗಜಿಣಗಿ – ಬಿಜೆಪಿ (2,56,526 ಗೆಲುವಿನ ಅಂತರ)

ಮತಕ್ಷೇತ್ರದ ಜಾತಿವಾರು ಅಂದಾಜು ಲೆಕ್ಕಾಚಾರ
ಲಿಂಗಾಯತರು – 5 ಲಕ್ಷ
ಕುರುಬ – 3 ಲಕ್ಷ
ತಳವಾರ – 1 ಲಕ್ಷ
ಎಸ್‌ಸಿ (ಬಲಗೈ) – 2.5 ಲಕ್ಷ
ಎಸ್‌ಸಿ (ಎಡಗೈ) – 1 ಲಕ್ಷ
ಬಂಜಾರಾ (ಲಂಬಾಣಿ) – 1.5 ಲಕ್ಷ
ಮುಸ್ಲಿಂ – 2.5 ಲಕ್ಷ
ಬ್ರಾಹ್ಮಣ – 40 ಸಾವಿರ
ಇತರೆ – 2,29,048

Share This Article