ವಿಜಯಪುರ: ರಾಜ್ಯ ವಿಧಾನಸಭಾ ಸಭೆ ಚುನಾವಣೆಯಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮಾಧ್ಯಮ ಸಮೀಕ್ಷೆಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ತಿರಸ್ಕರಿಸಿದ್ದು, ಈ ಬಾರಿ ಕಪ್ ನಮ್ದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಚಡಚಣದಲ್ಲಿ ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎಚ್‍ಡಿಕೆ, ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್ ಗೆ ಸ್ಪಷ್ಟ ಬಹುಮತ ನೀಡಲಿದ್ದು, ಯಾವುದೇ ಕಾರಣಕ್ಕೂ 50/50 ಎನ್ನುವ ಮಾತು ಬರುವುದಿಲ್ಲ ಎಂದರು.
ಇದೇ ವೇಳೆ ಸಿದ್ದರಾಮಯ್ಯ ಅವರ ಅವಕಾಶವಾದಿ ಹೇಳಿಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರು ಜಾತಿವಾದಿ, ಕುರುಬ ಜನಾಂಗ ಮತ ಪಡೆಯುವ ಕಾರಣಕ್ಕೆ ಬಾದಾಮಿಗೆ ಅರ್ಜಿ ಹಾಕಿದ್ದಾರೆ. ಇದು ಅವರ ಸಂಕುಚಿತ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇಂತಹವರಿಂದ ತಾನು ಪಾಠ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.
ರಾಜ್ಯ ದಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಮತ ಪಡೆಯಲು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅದ್ದರಿಂದಲೇ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮಾಡುತ್ತಿರುವುದು ಕೀಳು ಮಟ್ಟದ ರಾಜಕೀಯ, ಜೆಡಿಎಸ್ ಕಾಂಗ್ರೆಸ್ ಪರವೂ ಇಲ್ಲ, ಬಿಜೆಪಿ ಪರವೂ ಇಲ್ಲ. ಜೆಡಿಎಸ್ ಕನ್ನಡಿಗರ ಪರವಿದೆ ಎಂದರು.
ಕಾವೇರಿ ವಿಚಾರವಾಗಿ ಸದ್ಯ ಯಾವುದೇ ಹೇಳಿಕೆ ನೀಡುವುದಿಲ್ಲ. ಕಾವೇರಿ ವಿವಾದ ಇನ್ನು ಬಗೆ ಹರಿದಿಲ್ಲ. ಅದು ಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ನವರು ಸಾಧನೆ ಮಾಡಿರುವ ರೀತಿ ಹೇಳಿಕೊಳ್ಳುತ್ತಿದ್ದಾರೆ. ಕಾವೇರಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ. ಸೂಕ್ತ ಸಂದರ್ಭದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದರು.