– ಬೈಕ್ ಹೋಯ್ತು, ಬಚಾವ್ ಆದ ಸವಾರ
ವಿಜಯಪುರ: ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ವಿಜಯಪುರ ತಾಲೂಕಿನ ದ್ಯಾಬೇರಿ-ಜಂಬಗಿ ಮಾರ್ಗ ಮಧ್ಯದ ಸೇತುವೆ ತುಂಬಿ ಹರಿಯುತ್ತಿದೆ. ಈ ಸೇತುವೆ ಮೇಲೆ ದಾಟುತ್ತಿದ್ದ ಬೈಕ್ ಸವಾರ ನೀರು ಪಾಲಾಗಿದ್ದಾರೆ.
ಜಂಬಗಿ ಗ್ರಾಮದ ಪೀರಾಜಿ ವೆಂಕು ದಾನ್ವಾಡೆ ನೀರು ಪಾಲಾಗಿದ್ದವರು. ಅದೃಷ್ಟವಶಾತ್ ದಾನ್ವಾಡೆ ಪ್ರಾಣಾಪಯದಿಂದ ಪಾರಾಗಿದ್ದಾರೆ. ಆದರೆ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಪ್ರತ್ಯಕ್ಷದರ್ಶಿ ರಾಜು ಅವರು, ಬೆಳಗ್ಗೆ 8 ಸುಮಾರು ಹಳ್ಳ ತುಂಬಿ ಹರಿಯುತ್ತಿತ್ತು. ಈ ವೇಳೆ ಸವಾರ ಪೀರಾಜಿ ವೆಂಕು ದಾನ್ವಾಡೆ ದ್ಯಾಬೇರಿ ಗ್ರಾಮದಿಂದ ಜಂಬಗಿ ಗ್ರಾಮಕ್ಕೆ ಬರುತ್ತಿದ್ದರು. ನೀರು ಕಡಿಮೆ ಇದೆ ಎಂದು ಭಾವಿಸಿದ ಅವರು ಸೇತುವೆ ದಾಟಲು ಯತ್ನಿಸಿದ್ದಾರೆ. ಆದರೆ ಮಧ್ಯದಲ್ಲಿಯೇ ಸಿಲುಕಿಕೊಂಡ ಅವರು ನೀರಿನ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದರು ಎಂದು ಮಾಹಿತಿ ನೀಡಿದ್ದಾರೆ.
ದಾನ್ವಾಡೆ ಅವರನ್ನು ರಕ್ಷಣೆ ಮಾಡಬೇಕು ಅಂದ್ರೆ ಹಳ್ಳದಲ್ಲಿ ಮುಳ್ಳು ಕಂಟಿ ಬೆಳೆದಿದ್ದವು. ಅದನ್ನು ದಾಟಿ ಹೋಗಿ ರಕ್ಷಣೆ ಮಾಡುವುದು ಕಷ್ಟವಿತ್ತು. ಹೀಗಾಗಿ ಯಾರೊಬ್ಬರು ರಕ್ಷಣೆಗೆ ಹೋಗಲಿಲ್ಲ. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಅವರು ಈಜಿ ದಡ ಸೇರಿದ್ದಾರೆ. ಆದರೆ ಪೈಕ್ ಮಾತ್ರ ಪತ್ತೆಯಾಗಿಲ್ಲ ಎಂದು ತಿಳಿಸಿದರು.