ವಿಜಯಪುರ: ದಾಳಿ ವೇಳೆ ನಕಲಿ ಅಧಿಕಾರಿಯೊಬ್ಬ ಸಿಕ್ಕಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಗೆ ಎಸಿಬಿ ಅಧಿಕಾರಿಗಳಾದ ಡಿಎಸ್‍ಪಿ ಮಲ್ಲೇಶ್ ಹಾಗೂ ಇನ್ಸ್ ಪೆಕ್ಟರ್ ಸಚಿನ್ ಚಲವಾದಿ ದಾಳಿ ನಡೆಸಿದ್ದಾರೆ. ಈ ವೇಳೆ ಚಂದ್ರಹಾಸ ಹೊಸಮನಿ ನಕಲಿ ಅಧಿಕಾರಿಯಾಗಿ ಅಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.
Advertisement
Advertisement
ಸರ್ಕಾರಿ ಸಿಬ್ಬಂದಿಯಂತೆ ತಹಶೀಲ್ದಾರ್ ಕಚೇರಿಯಲ್ಲೇ ಪ್ರತ್ಯೇಕ ಟೇಬಲ್, ಪ್ರತ್ಯೇಕ ತಿಜೋರಿ ಹೊಂದಿದ್ದ ಹೊಸಮನಿ ಸಿಂಧುತ್ವ ನೀಡಲು ಹಣಮಂತ ರೆಡ್ಡಿ ಎಂಬುವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಹಣಮಂತ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ನಕಲಿ ಅಧಿಕಾರಿ ಅನ್ನೋದು ಬಯಲಾಗಿದೆ.
Advertisement
ಸಿಂಧುತ್ವ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡಿದ್ದ ಹೊಸಮನಿ, ಜನರಿಂದ ಸಿಂಧುತ್ವಕ್ಕಾಗಿ ಹಣ ಪಡೆಯುತ್ತಿದ್ದ. ಈ ಚಂದ್ರಹಾಸ ಹೊಸಮನಿ ಮೂಲಕವೇ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತಿತ್ತು ಎಂದು ಸಾರ್ವಜನಿಕರ ಆರೋಪ ಮಾಡಿದ್ದಾರೆ. ಹೊಸಮನಿಯನ್ನು ತಹಶೀಲ್ದಾರ್ ಕಚೇರಿಯ ಸರ್ಕಾರಿ ಸಿಬ್ಬಂದಿ ಎಂದು ಭಾವಿಸಿದ್ದ ಜನರು ಮತ್ತು ಎಸಿಬಿ ಅಧಿಕಾರಿಗಳು ನಕಲಿ ಎಂದು ತಿಳಿದು ದಂಗಾಗಿದ್ದಾರೆ.
Advertisement
ನಕಲಿ ಅಧಿಕಾರಿ ಹೊಸಮನಿಯನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, 25 ಕ್ಕೂ ಅಧಿಕ ಸಿಂಧುತ್ವ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಸಿ ಈತನಿಂದ ಹಣ ಪಡೆಯುತ್ತಿದ್ದ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.