– ಅನಾಥರಾದ ಮೃತ ದಂಪತಿಯ ನಾಲ್ಕು ಮಕ್ಕಳು
ವಿಜಯಪುರ: ಕತ್ತು ಹಾಗೂ ಕಾಲಿಗೆ ಸೀರೆಯಿಂದ ಬಿಗಿದ ಸ್ಥಿತಿಯಲ್ಲಿ ಪತ್ನಿ ಹಾಗೂ ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದೆ.
ಸಿದ್ದಪ್ಪ ಹರನಾಳ ಹಾಗೂ ಆತನ ಪತ್ನಿ ಮೇಘಾ ಹರನಾಳ ಶವ ಪತ್ತೆಯಾಗಿದೆ. ಎಂಟು ವರ್ಷಗಳ ಹಿಂದೆ ಮೇಘಾಳನ್ನ ಸಿದ್ದಪ್ಪ ಹರನಾಳ ಮದುವೆಯಾಗಿದ್ದ. ಪತಿ ಸಿದ್ದಪ್ಪನೇ ಪತ್ನಿ ಮೇಘಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೃತ ಮೇಘಾಳ ತಾಯಿ ಗದ್ದೆಮ್ಮ ಹೊಸಮನಿ ಅವರು ಈ ಆರೋಪ ಮಾಡಿದ್ದಾರೆ.
ಮೃತ ಸಿದ್ದಪ್ಪನ ತಾಯಿ ಶಾಂತಮ್ಮ ಹಾಗೂ ಸಹೋದರ ಶ್ರೀಕಾಂತ ಕಿರುಕುಳವೇ ಇದಕ್ಕೆ ಕಾರಣ ಎಂದು ಗದ್ದೆಮ್ಮ ದೂರಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬಾಲಣ್ಣ ನಂದಗಾವಿ ಹಾಗೂ ಮುದ್ದೇಬಿಹಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಸಿದ್ದಪ್ಪ ಹಾಗೂ ಮೇಘಾ ಸಂಸಾರದಲ್ಲಿ ಜಗಳವಾಗುತ್ತಾ ಬಂದಿತ್ತು. ರಾಜಿ ಪಂಚಾಯಿತಿ ಮಾಡಿ ಚೆನ್ನಾಗಿರಿ ಎಂದು ಹೇಳಿದ್ದೆವು. ಈಗ ನಮ್ಮ ಮಗಳನ್ನು ಕೊಲೆ ಮಾಡಿ ಅಳಿಯ ನೇಣಿಗೆ ಶರಣಾಗಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ದಂಪತಿಗೆ ನಾಲ್ಕು ಮಕ್ಕಳಿದ್ದು, ನಾಲ್ವರು ಅನಾಥರಾಗಿದ್ದಾರೆಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಶವಗಳನ್ನ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವಗಳನ್ನು ಹಸ್ತಾಂತರ ಮಾಡಲಿದ್ದಾರೆ. ಪೊಲೀಸರ ತನಿಖೆಯಲ್ಲಿ ಘಟನೆಯ ಕುರಿತು ಸತ್ತಾಂಶ ಹೊರಬೀಳಲಿದೆ.