– ಪತ್ನಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ
ವಿಜಯಪುರ: ಕೊರೊನಾ ಸೋಂಕಿತ ವೃದ್ಧೆಯ ಪತಿ ಕಳೆದ ಭಾನುವಾರ ರಾತ್ರಿ ಮೃತಪಟ್ಟಿದ್ದು, ಸೋಂಕಿಗೆ ಬಲಿಯಾಗಿರಬಹುದೇ ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಅವರು ಕೊರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಸರ್ಕಾರ ಪ್ರಕಟಿಸಿದೆ.
ಭಾನುವಾರ ಮಧ್ಯಾಹ್ನ ವೃದ್ಧೆಗೆ ಪಾಸಿಟಿವ್ ಬಂದಿತ್ತು. ಈ ಬೆನ್ನಲ್ಲೇ ವೃದ್ಧೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಒಟ್ಟು 24 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೇ ಅದೇ ರಾತ್ರಿ ವೃದ್ಧೆಯ ಪತಿ (69) ಮೃತಪಟ್ಟಿದ್ದರು.
Advertisement
Advertisement
ಶನಿವಾರ ರಾತ್ರಿ ದಿಢೀರ್ ಆಗಿ ರಾಜ್ಯ ಸರ್ಕಾರ ನಗರದ ಚಪ್ಪರ ಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಲು ಸೂಚನೆ ನೀಡಿತ್ತು. ಕೂಡಲೇ ಜಿಲ್ಲಾಡಳಿತ ಚಪ್ಪರಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಮಧ್ಯಾಹ್ನ ಈ ಚಪ್ಪರ ಬಂದ್ ಕಾಲೋನಿ ನಿವಾಸಿ 60 ವರ್ಷದ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದನ್ನು ರಾಜ್ಯ ಸರಕಾರ ದೃಢಪಡಿಸಿತ್ತು. ಇದಾದ ನಂತರ ಆಕೆಯ ಪತಿ ಮೃತಪಟ್ಟಿದ್ದರು.
Advertisement
Advertisement
ವೃದ್ಧನ ಕುಟುಂಬ ಅವಿಭಾಜ್ಯ ಕುಟುಂಬ ಆಗಿದ್ದು, ಮನೆಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 24 ಜನರು ಇದ್ದಾರೆ. ಒಟ್ಟು 22 ಜನರ ಗಂಟಲು ದ್ರವವನ್ನ ಪರೀಕ್ಷೆಗೆ ಕಳಿಸಲಾಗಿದೆ. ಪಾಸಿಟಿವ್ ಬಂದಿದ್ದ ವೃದ್ಧೆ ಮನೆ ಬಿಟ್ಟು ಎಲ್ಲೂ ಹೋಗಿರಲಿಲ್ಲ. ಆದರೆ ಪತಿ ಮಹಾರಾಷ್ಟ್ರದಲ್ಲಿ ಸಂಬಂಧಿಕರ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಅಲ್ಲಿಂದಲೇ ಕೊರೋನಾ ಬಂದಿರಬಹುದಾ ಎನ್ನುವ ಪ್ರಶ್ನೆ ಎದ್ದಿತ್ತು.
ಸೋಂಕಿತ ವೃದ್ಧೆ ಏಪ್ರಿಲ್ 6ರಂದು ಎರಡು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಲ್ಲಿಯು ಕೂಡ ಚಿಕಿತ್ಸೆ ನೀಡಿದ್ದರೂ ಗುಣಮುಖವಾಗಿರಲಿಲ್ಲ. ಈ ವೇಳೆ ಆಸ್ಪತ್ರೆಯವರಿಗೆ ಕೋವಿಡ್-19 ಇರುವ ಶಂಕೆ ಕಂಡುಬಂದು ಏಪ್ರಿಲ್ 9 ರಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಆಗ ವೃದ್ಧೆಯನ್ನು ಜಿಲ್ಲಾಸ್ಪತ್ರೆ ದಾಖಲಿಸಿ ಜಿಲ್ಲಾಡಳಿತ ಗಂಟಲು ದ್ರವ ಪರೀಕ್ಷೆಗೆ ಕಳಿಸಿತ್ತು. ಅವರ ಆರೋಗ್ಯ ಗಂಭೀರವಾದ ಕಾರಣ ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ವೃದ್ಧೆ ಬಗ್ಗೆ ಮಾಹಿತಿ ಕಲೆ ಹಾಕಲು ಹೋಗಿ ಅವರ ಮನೆಯಲ್ಲಿ ಚಹಾ ಕುಡಿದು ಬಂದಿದ್ದ ಗೋಲಗುಂಬಜ್ ಪಿಎಸ್‍ವೈ ಸೇರಿದಂತೆ ಇಬ್ಬರು ಪೇದೆಗಳ ಮೇಲೆ ನಿಗಾ ಇಡಲಾಗಿತ್ತು. ವೃದ್ಧೆಯ ಚಿಕಿತ್ಸೆಗಾಗಿ ಓಡಾಡಿದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಒಟ್ಟು 100 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.