ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರ ಎದುರೇ ಪಕ್ಷದ ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ವಿಜಯಪುರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆಯುತ್ತಿರುವ ಶಕ್ತಿ ಕೇಂದ್ರದ ಸಮಾವೇಶದಲ್ಲಿ ನಡೆದಿದೆ.
ಸಮಾವೇಶದಲ್ಲಿ ಭಾಗವಹಿಸಿದ್ದ ಯಡ್ಡಿಯೂರಪ್ಪ ಸಮ್ಮುಖದಲ್ಲೇ ಕಾರ್ಯಕರ್ತರು ಹಿಗ್ಗಾ ಮುಗ್ಗಾ ಥಳಿಸಿಕೊಂಡಿದ್ದು, ಚೇರ್ ಹಾಗೂ ಕೈ ಕೈ ಮಿಲಾಯಿಸಿದ್ದಾರೆ. ರಮೇಶ್ ಜಿಗಜಿಣಗಿ ಬೆಂಬಲಿಗರಿಂದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಈ ಬಾರಿ ಪಕ್ಷದ ಟಿಕೆಟ್ ನೀಡದೆ ಬೇರೆ ಅವರಿಗೆ ಟಿಕೆಟ್ ನೀಡುವಂತೆ ಬಿಎಸ್‍ವೈ ಅವರಿಗೆ ಮನವಿ ಸಲ್ಲಿಸಲು ಕೆಲ ಕಾರ್ಯಕರ್ತರು ಬಂದ ಸಂದರ್ಭದಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
Advertisement
Advertisement
ರಾಜ್ಯ ಬಿಜೆಪಿ ಘಟಕವೂ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಪ್ರಚಾರಕ್ಕೆ ಶಕ್ತಿ ತುಂಬಲು ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಎಲ್ಲಾ ನಾಯಕರು ಕಾರ್ಯಪ್ರವೃತ್ತಿ ಆಗಿದ್ದಾರೆ. ಆದರೆ ವಿಜಯಪುರ ಜಿಲ್ಲಾ ರಾಜಕೀಯದಲ್ಲಿ ಮಾತ್ರ ಬಣದ ರಾಜಕೀಯ ಆರಂಭವಾಗಿದೆ.
Advertisement
ಲೋಕಸಭಾ ಚುನಾವಣೆಯ ರಣಕಹಳೆಯನ್ನ ಬಿಜೆಪಿ ವಿಜಯಪುರ ಮೀಸಲು ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಮೋದಿ ವಿಜಯ ಸಂಕಲ್ಪ ಯಾತ್ರೆಯ ವಿಜಯಪುರ ಬಾಗಲಕೋಟ ಶಕ್ತಿ ಕೇಂದ್ರದ ಸಮಾವೇಶವನ್ನ ಆಯೋಜಿಸಲಾಗಿದ್ದು, ಸಮಾವೇಶಕ್ಕೆ ಮಾಜಿ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಕೃಷಿ ಸಚಿವ ಪುರುಷೋತ್ತಮ, ವಿಜಯಪುರ ಸಂಸದ ಹಾಗೂ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಬಾಗಲಕೋಟ ಸಂಸದ ಪಿ ಸಿ ಗದ್ದಿಗೌಡರ್, ಮಾಜಿ ಸಚಿವರಾದ ಮುರಗೇಶ್ ನಿರಾಣಿ, ಗೋವಿಂದ್ ಕಾರಜೋಳ ಸೇರಿ ಹಲವರು ಮಾಜಿ ಹಾಲಿ ಶಾಸಕರು ಭಾಗಿಯಾಗಿದ್ದರು.
Advertisement
ಇತ್ತ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಶಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಬಿಜೆಪಿ ನಾಯಕರು ಗೈರಾಗಿದ್ದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೂಡ ಗೈರಾಗಿದ್ದಾರೆ. ನಿನ್ನೆ ರಮೇಶ್ ಜಿಗಜಿಣಗಿ ವಿರುದ್ಧ ಫೇಸ್ ಬುಕ್ ಮೂಲಕ ಬಸವರಾಜ್ ಯತ್ನಾಳ ಅವರು ವಾಗ್ದಾಳಿ ನಡೆಸಿ ಸಮಾವೇಶಕ್ಕೆ ಗೈರಾಗುವ ಮೂಲಕ ಟಾಂಗ್ ನೀಡಿದ್ದಾರೆ.
ಸಚಿವ ರಮೇಶ್ ಜಿಗಜಿಣಗಿ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನಡುವಿನ ಭಿನ್ನಮತವನ್ನು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಮನಗೊಳಿಸುತ್ತಾರೆಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಎಸ್‍ವೈ ಅವರ ಎದುರೇ ಅಸಮಾಧಾನ ಸ್ಫೋಟಗೊಂಡಿದ್ದು, ತೀವ್ರ ಮುಜಗರಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಪರೋಕ್ಷ ಟಾಂಗ್ ನೀಡಿದ್ದ ಜಿಗಜಿಣಗಿ :
ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ್ದ ಜಿಗಜಿಣಗಿ ಅವರು, ಈ ಹಿಂದೆ ಸಂಸದರಾಗಿದ್ದವರು ಮಾಡಲಾರದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನೂರಾರು ಕೋಟಿ ಅನುದಾನ ತಂದಿದ್ದೇನೆ. ಒಂದು ವೇಳೆ ಹಿಂದಿನ ಸಂಸದರು ಯಾರಾದರೂ ನನಗಿಂತ ಹೆಚ್ಚಿನ ಕೆಲಸ ಮಾಡಿದ್ದರೆ, ಅನುದಾನ ತಂದಿದ್ದರೆ ಸಾಬೀತುಪಡಿಸಿದರೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ಇದಕ್ಕೆ ಟಾಂಗ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಬಸನಗೌಡ ಪಾಟೀಲರು, 10 ವರ್ಷಗಳಲ್ಲಿ ಸಂಸದರ ನಿಧಿ ಎಲ್ಲಿ ಮತ್ತು ಯಾವ ಹಳ್ಳಿಗೆ ಮುಟ್ಟಿತು? ವಿನಾಶಕಾಲೇ ವಿಪರೀತ ಬುದ್ಧಿ, ಯಾವ ಹಳ್ಳಿಗೆ ಎಷ್ಟು ಹಣ ಮುಟ್ಟಿದೆ, ಸಂಸದರ ಆದರ್ಶ ಗ್ರಾಮದ ಪರಿಸ್ಥಿತಿ ಹೇಗಿದೆ, ಅದು ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದಿದೆ, ಹಿಂದಿನ ಯಾವ ಸಂಸದರೂ ಮಾಡದಷ್ಟು ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ ಎಂದು ಹೇಳಲು ನಾಚಿಕೆಯಾಗಬೇಕು ಎಂದು ಟೀಕಿಸಿದ್ದರು. ಇವರ ಹೇಳಿಕೆಯನ್ನು ಹಲವು ಬಿಜೆಪಿ ಕಾರ್ಯಕರ್ತರು ಶೇರ್ ಮಾಡಿ ಬೆಂಬಲ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv