ವಿಜಯಪುರ: ಯಾರ ಹಣೆಬರಹದಲ್ಲಿ ಏನಿದೆ ಯಾರಿಗೆ ಗೊತ್ತು? 2024 ರಲ್ಲಿ ನಾನು ಸಿಎಂ ಆಗೋದಿದ್ರೆ ಯಾರಾದರು ಕಸಿದುಕೊಳ್ಳುತ್ತಾರಾ? ಎನ್ನುವ ಮೂಲಕ ತಾವು ಸಿಎಂ ಆಕಾಂಕ್ಷಿ ಎನ್ನುವುದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ನನ್ನ ಹಣೆಬರಹದಲ್ಲಿ ಸಿಎಂ ಆಗೋದು ಬರೆದಿದ್ರೆ ನಾನು 2024ರಲ್ಲಿ ಸಿಎಂ ಆಗೇ ಆಗುತ್ತೇನೆ ಎಂದರು.
ಲಕ್ಷ್ಮಣ ಸವದಿ ಹಣೆಬರಹದಲ್ಲಿ ಡಿಸಿಎಂ ಆಗಬೇಕು ಎಂದು ಬರೆದಿದೆ ಹಾಗಾಗಿ ಅವರು ಡಿಸಿಎಂ ಆಗಿದ್ದಾರೆ. ಅವರ ಹಣೆಬರಹದಲ್ಲಿ ಡಿಸಿಎಂ ಆಗೆ ಇರಬೇಕು ಅಂತಿದ್ರೆ ಮುಂದುವರೆಯುತ್ತಾರೆ ಎನ್ನುವ ಮೂಲಕ ಡಿಸಿಎಂ ಸವದಿಗೆ ಟಾಂಗ್ ನೀಡಿದರು.
ಸಚಿವ ಸ್ಥಾನಕ್ಕಾಗಿ ಉಮೇಶ ಕತ್ತಿ ಸಿಎಂ ಸುತ್ತ ಗಿರಕಿ ಹೊಡೆಯುವ ಅವಶ್ಯಕತೆ ಇಲ್ಲ. ಅವರು ಸಚಿವರಾಗೋದು ಗ್ಯಾರೆಂಟಿ. ಅಥಣಿ, ಕಾಗವಾಡ ಗೆಲ್ಲಿಸಿದರೆ ಸಚಿವ ಸ್ಥಾನ ಸಿಗುತ್ತೆ ಎಂದು ಪಕ್ಷದ ನಾಯಕರು, ನಾವೆಲ್ಲ ಹೇಳಿದ್ದೆವು. ಹಾಗಾಗಿ ಅವರು ಆತಂಕ ಪಡುವ ಅವಶ್ಯಕತೆ ಇಲ್ಲ, ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ನಮಗಿದೆ ಎನ್ನುವ ಮೂಲಕ ಕತ್ತಿ ಸಚಿವರಾಗುವುದು ಪಕ್ಕ ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದವರು ಮರಾಠಾ ಭಾಷೆ, ಗಡಿ ವಿಚಾರ ಬಿಟ್ಟು ಅಭಿವೃದ್ಧಿ ಮಾಡಬೇಕು. ಬೆಳಗಾವಿ ನಮ್ಮದು ಅಂದ್ರೆ ನಾವು ಬಿಡೋಕಾಗುತ್ತಾ? ನಾವೇನು ಕೈಯಲ್ಲಿ ಬಳೆ ತೊಟ್ಟುಕೊಂಡಿಲ್ಲ, ತಾಕತ್ತಿದ್ದರೆ ತೆಗೆದುಕೊಳ್ಳಿ ನೋಡೋಣ. ಐದು ವರ್ಷ ಅಲ್ಲ, ಮುಂದೆ ಮತ್ತೊಬ್ಬರು ಹುಟ್ಟಿಬಂದರೂ ಬೆಳಗಾವಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸವಾಲು ಎಸೆದರು.
ನನ್ನ ಪರಿಸ್ಥಿತಿ ಸೂಸೈಡ್ ಬಾಂಬರ್ ರೀತಿ ಆಗಿದೆ. ಡಿಸಿಎಂ ಸ್ಥಾನದ ವಿಚಾರ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಎಸ್‍ಎಂಎಸ್ ಮತ್ತು ವಾಟ್ಸಪ್ ಮೂಲಕ ಸಂದೇಶ ಬಂದಿದೆ. ಆದರೆ ನಾನು ನನ್ನ ಮಾತನ್ನು ಹಿಂಪಡೆದಿಲ್ಲ. ನಾನು ವಿಷಾದವನ್ನು ವ್ಯಕ್ತಪಡಿಸಿಲ್ಲ. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಮತ್ತೊಮ್ಮೆ ತಮ್ಮ ವಾದವನ್ನು ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ.