– ಚಿಕಿತ್ಸೆಗಾಗಿ ಜಮೀನನ್ನೇ ಮಾರಿದ್ದ ಪತ್ನಿ
– ಪತಿ ಕಳೆದುಕೊಂಡ ಪತ್ನಿಯ ಗೋಳಾಟ
ವಿಜಯಪುರ: ಆಕ್ಸಿಡೆಂಟ್ ಆಗಿ ಖಾಸಗಿ ಆಸ್ಪತ್ರೆಗೆ ದಾಖಲಾದ್ದ ವ್ಯಕ್ತಿ, 1 ತಿಂಗಳ ಚಿಕಿತ್ಸೆ ಬಳಿಕ ಸಾವನ್ನಪ್ಪಿದ್ದಾನೆ. ಚಿಕಿತ್ಸೆಗೆ 10 ಲಕ್ಷ ಪೀಕಿದ ವೈದ್ಯರು, ಇದೀಗ ನಿಮ್ಮ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂತ ಕೈಚೆಲ್ಲಿದ್ದಾರೆ. ಜಮೀನೆಲ್ಲಾ ಮಾರಿ ದುಡ್ಡುಕೊಟ್ಟೆ, ಆದರೂ ನನ್ನ ಪತಿಯನ್ನ ಉಳಿಸಿಕೊಟ್ಟಿಲ್ಲ. ವೈದ್ಯರು ಬೇಕಂತಲೇ ಹಣ ಪೀಕಿದ್ದಾರೆ ಅಂತ ಕುಟುಂಬವರ್ಗ ಕಿಡಿಕಾರಿದೆ.
ವಿಜಯಪುರದ ಇಂಡಿ ತಾಲೂಕಿನ ತಡವಲಗಾ ನಿವಾಸಿ ಶೋಭಾ ಪತಿ ಸಂಗಮೇಶ್ ಗಂಗಶೆಟ್ಟಿ ಜನವರಿ 10ರಂದು ಅಪಘಾತದಲ್ಲಿ ಗಾಯಗೊಂಡು ಯಶೋಧರಾ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯವರು ಚಿಕಿತ್ಸೆಗಾಗಿ 8ರಿಂದ 10 ಲಕ್ಷ ರೂಪಾಯಿ ಪೀಕಿದ್ದಾರಂತೆ. ಇದಕ್ಕಾಗಿ ಶೋಭಾ ಜಮೀನೆಲ್ಲ ಮಾರಿದ್ದಾರೆ. ಆದರೆ ಸಂಗಮೇಶ್ ನಿನ್ನೆ 4 ಗಂಟೆ ವೇಳೆಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಇತ್ತ ವೈದ್ಯರು ನಮಗೆ ಮೋಸ ಮಾಡಿದ್ರು ಅಂತ ಶೋಭಾ ದೂರಿದ್ದಾರೆ.
ಈ ಸಂಬಂಧ ಮೃತ ಸಂಗಮೇಶ ಕುಟುಂಬಸ್ಥರು ಹಾಗೂ ವೈದ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಕೈಕೈ ಮಿಲಾಯಿಸೋ ಹಂತಕ್ಕೂ ಹೋಗಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಹಣವೂ ಹೋಯ್ತು ಜೀವವೂ ಹೋಯ್ತು ಎಂದು ಮೃತನ ಪೋಷಕರು ಸಂಬಂಧಿಕರು ಆರೋಪಿಸಿದರು. ಆದರೆ ಈ ಎಲ್ಲಾ ಆರೋಪಗಳನ್ನು ಡಾಕ್ಟರ್ ಶಿವಾನಂದ್ ಅಲ್ಲಗಳೆದಿದ್ದಾರೆ.
ಸೂಪರ್ ಸ್ಪೇಷಾಲಿಟಿ, ಮಲ್ಟಿ ಸ್ಪೇಷಾಲಿಟಿ ಹೆಸರಲ್ಲಿ ಸುಲಿಗೆ ಕೆಲಸವಾಗುತ್ತಿದೆ. ಇದಕ್ಕೆ ಎಲ್ಲ ವೈದ್ಯರೂ ಅಪವಾದವಲ್ಲ. ಆದರೂ, ಕೆಲವರು ದಂಧೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.