ವಿಜಯಪುರ: ಆಸ್ಪತ್ರೆಗೆ ದಾಖಲಾಗಿರುವ ಉಡುಪಿ ಪೇಜಾವರ ಶ್ರೀಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ವಿಜಯಪುರದ ಮುಸ್ಲಿಮರು ಪ್ರಾರ್ಥಿಸಿದ್ದಾರೆ.
ನಗರದ ಮುರ್ತುಜಾ ಖಾದ್ರಿ ದರ್ಗಾದಲ್ಲಿ ಹಲವಾರು ಮುಸ್ಲಿಂ ಯುವಕರು ನಮಾಜ್ ಮಾಡಿ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಅಲ್ಪಸಂಖ್ಯಾತ ಮುಖಂಡ ಯಾಸೀನ್ ಜವಳಿ ನೇತೃತ್ವದಲ್ಲಿ ಮುಸ್ಲಿಂ ಯುವಕರು ಈ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕಳೆದ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಕೂಡಲೇ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ವಲ್ಪ ಮಟ್ಟಿನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಎದೆಯಲ್ಲಿ ಕಫ ಕಟ್ಟಿದ್ದು, ನಿಧಾನವಾಗಿ ಕರಗುತ್ತಿದೆ. ಹೀಗಾಗಿ ಶ್ರೀಗಳು ಸದ್ಯ ಚೇತರಿಸಿಕೊಳ್ಳುತ್ತಿದ್ದು, ಭಕ್ತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಶ್ರೀಗಳ ಆಪ್ತ ಸಹಾಯಕರು ಮಾಹಿತಿ ನೀಡಿದ್ದಾರೆ.