ವಿಜಯಪುರ: ತನಗೆ ಮದುವೆ ಮಾಡಿಲ್ಲವೆಂದು ಮಗನೊಬ್ಬ ತಂದೆ- ತಾಯಿಯನ್ನ ಹಿಗ್ಗಾಮುಗ್ಗ ಥಳಿಸಿದ ಘಟನೆ ವಿಜಯಪುರ ದಲ್ಲಿ ನಡೆದಿದೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಿಸನಾಳ ಗ್ರಾಮದ ಶರಣಮ್ಮ, ಹೇಮಯ್ಯ ಹಿರೇಮಠ ದಂಪತಿಯ ದ್ವಿತೀಯ ಪುತ್ರ ಶಂಕ್ರಯ್ಯ ತನಗೆ ಬೇಗನೆ ಮದುವೆ ಮಾಡದ ಕಾರಣ ಥಳಿಸಿದ್ದಾನೆ. ಶಂಕ್ರಯ್ಯ ತನಗೆ ಮದುವೆ ಮಾಡುವಂತೆ ಪ್ರತಿದಿನ ಗಲಾಟೆ ಮಾಡುತ್ತಿದ್ದನು ಎಂದು ವೃದ್ಧ ತಂದೆ-ತಾಯಿ ದೂರಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಮಾತನಾಡಿ, ಅನೇಕ ಕನ್ಯೆಗಳನ್ನು ನೋಡಿದ್ರೂ ಈತನನ್ನು ಯಾರೂ ಒಪ್ಪಲಿಲ್ಲ. ಆದರೂ ಹೆತ್ತವರನ್ನು ಪ್ರತಿನಿತ್ಯ ಪೀಡುಸುತ್ತಿದ್ದನು. ಇದರಿಂದ ಬೇಸತ್ತ ಹೆತ್ತವರು, ಮೊದಲು ದುಡಿದು ಜೀವನ ನಡೆಸು. ಆ ಮೇಲೆ ಮದುವೆ ಎಂದು ತಂದೆ-ತಾಯಿ ಹೇಳಿದ್ದಾರೆ. ಅಲ್ಲದೆ ಯಾವುದೇ ದುಡಿಮೆ ಇಲ್ಲದೆ ಊರಲ್ಲಿ ಖಾಲಿ ಸುತ್ತಾಡುತ್ತಿದ್ದನು. ಅದಕ್ಕೆ ದುಡಿಮೆ ಇಲ್ಲದ ಕಾರಣ ಮದುವೆ ಮಾಡಲು ಹೇಮಯ್ಯ ದಂಪತಿ ಮದುವೆಗೆ ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹೆತ್ತವರು ಈ ರೀತಿ ಹೇಳಿದ್ದಕ್ಕೆ ಕೋಪಗೊಂಡ ಶಂಕ್ರಯ್ಯ ರಾತ್ರಿ ತಂದೆ-ತಾಯಿ ಜೊತೆ ಗಲಾಟೆ ಮಾಡಿ ಮಾತಿಗೆ ಮಾತು ಬೆಳೆದು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪರಿಣಾಮ ಹೇಮಯ್ಯ ದಂಪತಿಯ ಕಣ್ಣು, ತಲೆ, ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ವಿಜಯಪುರ ಜಿಲ್ಲಾಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ನಂತರ ಬ್ಲೇಡ್ ನಿಂದ ತಾನೇ ತಲೆ ಹಾಗೂ ಕೈಗೆ ಗಾಯ ಮಾಡಿಕೊಂಡು ತಂದೆ-ತಾಯಿಯೊಂದಿಗೆ ಶಂಕ್ರಯ್ಯ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಲ್ಲೆ ಮಾಡಿದ ಶಂಕ್ರಯ್ಯ ಬುದ್ಧಿಮಾಂದ್ಯ ಎಂದು ಹೇಳಲಾಗುತ್ತಿದ್ದು, ಈ ಘಟನೆ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.