– ಬೇಡಿ ಕಳಚೋವರೆಗೆ ಮನೆಗೆ ಹೋಗುವಂತಿಲ್ಲ
– ದೇವಸ್ಥಾನದಲ್ಲೇ 18 ಜನ ವಾಸ್ತವ್ಯ
ವಿಜಯಪುರ: ಅಪರಾಧ ಮಾಡಿ ಬೇಡಿ ತೊಟ್ಟ ಕೈದಿ ಜಾಮೀನಿನ ಮೇಲಾದರೂ ಬಿಡುಗಡೆಯಾಗಬಹುದು. ಅದರೆ ಇಲ್ಲಿ ಮದುವೆಯಾಗಿ ಬೇಡಿ ತೊಟ್ಟರೆ ಮುಗೀತು ಯಾರೊಬ್ಬರ ವಕಾಲತ್ತು ನಡೆಯುವುದಿಲ್ಲ. ಬೇಡಿ ಕಳಚಲು ದೇವರ ಅಪ್ಪಣೆಯಾಗಲೇಬೇಕು.
ಹೌದು. ಅಚ್ಚರಿಯಾದರೂ ಸತ್ಯ. ಇಂಥದ್ದೊಂದು ಸಂಪ್ರದಾಯ ನೂರಾರು ವರ್ಷಗಳಿಂದ ಸದ್ದಿಲ್ಲದೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಮದುವೆಯಾಗಿ ಬೇಡಿ ತೊಟ್ಟು ದೇವಸ್ಥಾನಕ್ಕೆ ಬಂದರೆ ನಂತರ ಬೇಡಿ ಕಳಚಿ ಬೀಳುವವರೆಗೂ ಅವರು ಮನೆಗೆ ಹೋಗುವ ಆಗಿಲ್ಲ.
ಇಲ್ಲಿನ ಮುಜಾವರ್ ಎಂಬ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆ ಆದರೆ ಈ ರೀತಿ ಕಾಲಿಗೆ ಕಬ್ಬಿಣದ ಕೋಳ ಹಾಕಿಕೊಳ್ಳುವ ಸಂಪ್ರದಾಯವಿದೆ. ಇದರ ಪ್ರಕಾರ ಬೇಡಿ ತೊಟ್ಟ ಸುಮಾರು 18 ಜನ ದೇವಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಳೆದ 15 ದಿನಗಳಿಂದ ಕಾಲಿಗೆ ಕಬ್ಬಿಣದ ಸಣ್ಣ ಸರಳಿನಿಂದ ಮಾಡಿದ ಬೇಡಿ ಕಟ್ಟಿಕೊಂಡು ದೇವಸ್ಥಾನದಲ್ಲೇ ಅಡ್ಡಾಡುತ್ತಿದ್ದಾರೆ. ಎಷ್ಟೇ ದಿನಗಳಾಗಲಿ ಬೇಡಿ ತನ್ನಿಂತಾನೆ ಕಳಚುವವರೆಗೂ ಮನೆಗೆ ಹೋಗುವಂತಿಲ್ಲ.
ಸ್ಥಳೀಯ ದಾವಲ್‍ಮಲ್ಲಿಕ್ ದೇವಸ್ಥಾನದ ಅರ್ಚಕರಾದ ಹಿಂದೂ ಕುರುಬ ಸಮುದಾಯ ಅರ್ಜುನ ಮುಜಾವರ್ ಆಗಿದ್ದಾರೆ. ಮುಜಾವರ ಕುಟುಂಬ ಸದ್ಯಸರೇ ಬೇಡಿ ಹಾಕಿಕೊಂಡು ದೇವರ ಅಪ್ಪಣೆಗಾಗಿ ಕಾಯುತ್ತಿದ್ದಾರೆ. ಮುಜಾವರ್ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆ ಆದರೆ ಈ ರೀತಿ ಕಾಲಿಗೆ ಕಬ್ಬಿಣದ ಕೋಳ ಹಾಕಿಕೊಳ್ಳುವ ಸಂಪ್ರದಾಯವಿದೆ. ಕಾಲಿಗೆ ಕೋಳ ಹಾಕಿಕೊಂಡು ದಾವಲ್‍ಮಲ್ಲಿಕ್ ದೇವರ ಮೊರೆ ಹೋಗುತ್ತಾರೆ.
ದೇವರು ಅಪ್ಪಣೆ ಕೊಟ್ಟು ತನ್ನಿಂದ ತಾನೇ ಕೋಳ ಮುರಿಯುವ ವರೆಗೂ ಯಾವೊಬ್ಬ ಕುಟುಂಬದ ಸದಸ್ಯ ಕೂಡ ಮನೆಗೆ ಹೋಗಿ ಸಂಸಾರ ಮಾಡುವಂತಿಲ್ಲ. ಈಗಾಗಲೇ 6 ಜನರ ಬೇಡಿ ಕಳಚಿದ್ದು ಇನ್ನುಳಿದ 18 ಜನ ದೇವರ ಕೃಪೆಗಾಗಿ ಕಾದಿದ್ದಾರೆ.