– ಕಿರಿಯರಿಗೆ ಸಚಿವರಾಗಲು ಹಿರಿಯರು ಅವಕಾಶ ನೀಡ್ಬೇಕು
ವಿಜಯಪುರ: ಸಿಎಂ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಪಕ್ಷಕ್ಕೆ ಬೆಂಬಲ ನೀಡಿದ್ದ 10 ಜನ ಕೂಡ ಸಚಿವರಾಗಿದ್ದಾರೆ. ಈಗಾಗಲೇ ಅವರಿಗೆ ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ಸಿಎಂ ಅವರು ಕೊಟ್ಟಿದ್ದಾರೆ. ಬರುವ ಬಜೆಟ್ ನಲ್ಲಿ ಎಲ್ಲಾ ಶಾಸಕರಿಗೂ ಸಮನಾಗಿ ಅಭಿವೃದ್ಧಿಗೆ ಹಣ ಕೊಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿಕೊಂಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮಾನತೆ ಆಗಿದೆ. ಅಲ್ಲದೆ ಎಲ್ಲಾ ಜಿಲ್ಲೆಗಳಿಗೆ, ಎಲ್ಲ ಭಾಗಗಳಿಗೆ ಪ್ರಾತಿನಿದ್ಯ ಕೊಡಬೇಕಿದೆ. ಅಲ್ಪ-ಸ್ವಲ್ಪ ಪುನರ್ ರಚನೆಯಾದ್ರೂ ಪರವಾಗಿಲ್ಲ. ಹಾಗಾಗಿ ಕೆಲ ಹಿರಿಯ ಸಚಿವರು ತ್ಯಾಗ ಮಾಡಬೇಕು, ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವ ಮೂಲಕ ತಮಗೂ ಸಚಿವ ಸ್ಥಾನ ಸಿಗಬೇಕಿತ್ತು ಎಂಬ ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ರಾಜ್ಯ ಸರ್ಕಾರ 3 ವರ್ಷ ಸುಭದ್ರವಾಗಿರಲು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಪತ್ರ ಬರೆದಿದ್ದೇನೆ. ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮಾನತೆ, ಬಜೆಟ್ ನಲ್ಲಿ ಹಣ ಮೀಸಲು ಬಗ್ಗೆ ಶಾಸಕರೊಂದಿಗೆ ಚರ್ಚಿಸಬೇಕು. ಸಚಿವ ಸಂಪುಟ ಈಗ ಕೇವಲ ಬೆಂಗಳೂರು, ಬೆಳಗಾವಿಗೆ ಎಂಬಂತಾಗಿದೆ. ಸಚಿವ ಸ್ಥಾನದ ಬಗ್ಗೆ ಬಿಜೆಪಿ ಶಾಸಕರ ಆಕಾಂಕ್ಷೆಗಳಿಗೆ ಸ್ಪಂದಿಸಬೇಕು ಎಂದು ಪತ್ರ ಬರೆದಿದ್ದೇನೆ. ಈ ಕುರಿತು ಚರ್ಚಿಸಲು ಸಿಎಂಗೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆದಿದ್ದೇನೆ ಎಂದರು.
Advertisement
ಮುಖ್ಯಮಂತ್ರಿಗಳ ಮೇಲೆ ನಮಗೆ ಅದಮ್ಯ ವಿಶ್ವಾಸವಿದೆ. ಅವರು ಮೂರು ವರ್ಷ ಉಳಿಯಬೇಕು, ಸಿಎಂ ಆಗಿರಬೇಕು ಎಂದರು. ಅವರ ಸಚಿವ ಸಂಪುಟದ ಬಗ್ಗೆ ಅವರೇ ಹೇಳಿಕೆ ಕೊಡಬೇಕು. ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಡಗು, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗಕ್ಕೆ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತಿಳಿಸಿದರು.
Advertisement
ಈ ಜಿಲ್ಲೆಗಳಿಗೆಲ್ಲ ನ್ಯಾಯ ಕೊಡಬೇಕು, ಉತ್ತರ ಕರ್ನಾಟಕವೇ ಬಿಜೆಪಿಗೆ ಬೇಸ್(ಮೂಲ) ಆಗಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಒಂದೊಂದು ಸಚಿವ ಸ್ಥಾನ ಕೊಡಬೇಕು ಎನ್ನುವ ಮೂಲಕ ತಮಗೂ ಸಿಗಬೇಕಿದೆ ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಅಲ್ಲದೆ ಎಲ್ಲಾ ಒಯ್ದು ಬೆಂಗಳೂರು, ಮಂಗಳೂರಿಗೆ ಕೊಟ್ರೆ ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ನಾವು ಇದ್ದೀವಿ ಅನ್ನೋ ನೋವು ಶಾಸಕರಲ್ಲಿದೆ, ಹಾಗಾಗಿ ಅವರೊಂದಿಗೆ ಸಿಎಂ ಚರ್ಚೆ ಮಾಡಬೇಕು. ಯಡಿಯೂರಪ್ಪನವರು ಸಮರ್ಥರಿದ್ದಾರೆ, ಮಾಡ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಎಲ್ಲ ಶಾಸಕರ ಭಾವನೆ ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಅಲ್ಲ, ನಾನೇನು ಬೇಡುವುದೂ ಇಲ್ಲ ಎನ್ನುವ ಮೂಲಕ ಅಸಮಾಧಾನವನ್ನು ಸರಿಪಡಿಸಿಕೊಂಡ ಯತ್ನಾಳ್, ಸಿಎಂ ಒಳ್ಳೆ ಬಜೆಟ್ ನೀಡಲು ರೆಡಿ ಇದ್ದಾರೆ ಎಂದು ಹೇಳಿದರು.