ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‍ನನ್ನು (Darshan) ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್, ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಭೇಟಿಯಾಗಿದ್ದಾರೆ.
ಜೈಲಿಗೆ ಪತ್ನಿ ಹಾಗೂ ಪುತ್ರ ಬರುತ್ತಿದ್ದಂತೆ ದರ್ಶನ್ ಭಾವುಕರಾಗಿದ್ದಾರೆ. ಈ ವೇಳೆ ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್ ಕಣ್ಣೀರು ಹಾಕಿದ್ದಾರೆ. ಅಳುತ್ತಲೇ ನಡೆದ ಘಟನೆಯ ಬಗ್ಗೆ ಮಾತಾಡಿದ್ದಾರೆ. ಅರ್ಧ ಗಂಟೆಯಲ್ಲಿ ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯ ಮಗನ ಜೊತೆಯೇ ದರ್ಶನ್ ಕಳೆದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ದರ್ಶನ್ ಗ್ಯಾಂಗ್‍ನಿಂದ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ರಾಜ್ಯದ ಜನರನ್ನ ಬೆಚ್ಚಿ ಬೀಳಿಸಿತ್ತು. ರೇಣುಕಾಸ್ವಾಮಿ ದರ್ಶನ್‍ನ ಗೆಳತಿ ನಟಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ, ಬೆಂಗಳೂರಿನ ಆರ್‍ಆರ್ ನಗರದ ಪಟ್ಟಣಗೆರೆ ಶೆಡ್‍ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಕಬ್ಬಿಣದ ರಾಡ್, ರಿಪೀಸ್, ಲಾಠಿಯಿಂದ ಹಲ್ಲೆ ಮಾಡಿದ್ದ ದರ್ಶನ್ ಗ್ಯಾಂಗ್, ರೇಣುಕಾಸ್ವಾಮಿಯ ತಲೆಯನ್ನು ಲಾರಿಗೆ ಜಜ್ಜಿತ್ತು. ಇದರಿಂದ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಕರೆಂಟ್ ಶಾಕ್ ಕೊಟ್ಟಿದ್ದರು ಎಂಬ ವಿಚಾರವು ಬೆಳಕಿಗೆ ಬಂದಿತ್ತು.
ಪೋಲೀಸರು ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.