ಲೂಸ್ ಮಾದ ಯೋಗಿ (Loose Mada Yogi) ಮತ್ತು ಮೋಹಕ ತಾರೆ ರಮ್ಯಾ (Ramya) ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ‘ಸಿದ್ಲಿಂಗು’ (Sidlingu 2) ಸಿನಿಮಾ ನಾನಾ ಕಾರಣಗಳಿಂದ ಅಚ್ಚರಿ ಮೂಡಿಸಿತ್ತು. ಯೋಗಿ ಜೊತೆ ರಮ್ಯಾ ಪಾತ್ರ ಮಾಡುತ್ತಿದ್ದಾರೆ ಎನ್ನುವುದೇ ಆ ಮಟ್ಟಿಗೆ ದೊಡ್ಡ ಸುದ್ದಿ. ರಮ್ಯಾ ಜೊತೆ ಸಿನಿಮಾ ಮಾಡಬೇಕು ಎನ್ನುವುದು ಯೋಗಿ ಕನಸಾಗಿತ್ತು. ಜೊತೆಗೆ ನಿರ್ದೇಶಕ ವಿಜಯ ಪ್ರಸಾದ್ (Vijay Prasad) ಅವರ ಜಾನರ್ ಚಿತ್ರದಲ್ಲಿ ಮೋಹಕ ತಾರೆ ಪಾತ್ರವಾಗಲಿದ್ದಾರಾ ಎನ್ನುವುದು ಇನ್ನೂ ಅಚ್ಚರಿ.
ಈ ಎಲ್ಲ ಅಚ್ಚರಿಗಳ ಮಧ್ಯ ರಮ್ಯಾ ಪಾತ್ರ ಮಾಡಿದರು. ಅದೂ ಮಂಗಳಾ ಟೀಚರ್ ಪಾತ್ರ. ನಾಯಕ ಕಾರು ಚಾಲಕ. ನಾಯಕಿ ಟೀಚರ್ ಈ ಕಾಂಬಿನೇಷನ್ ಕುತೂಹಲ ಮೂಡಿಸಿತ್ತು. ರಮ್ಯಾ ಈ ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಕೂಡ ಹೊಡೆದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಸಿನಿಮಾ ಕೊನೆಯಲ್ಲಿ ರಮ್ಯಾ ಪಾತ್ರ ದುರಂತ ಅಂತ್ಯ ಕಾಣುತ್ತದೆ. ಅದು ಬೇಸರದ ಸಂಗತಿಯಾಗಿತ್ತು.
ಈಗ ಆ ಕಥೆಯ ಮುಂದುವರಿಕೆಯಾಗಿ ‘ಸಿದ್ಲಿಂಗು 2’ ಸಿನಿಮಾ ಮೂಡಿ ಬರಲಿದೆ. ನಿರ್ದೇಶಕ ವಿಜಯ್ ಪ್ರಸಾದ್ ಅವರು ಈಗಾಗಲೇ ಚಿತ್ರದಕಥೆ ಬರೆಯಲು ಶುರು ಮಾಡಿದ್ದಾರೆ. ಚಿತ್ರಕಥೆ ಬರೆಯುವಾಗ ಮಂಗಳಾ ಟೀಚರ್ ಪಾತ್ರ ರಪ್ ಅಂತ ಪಾಸಾಯಿತು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮೊದಲ ಭಾಗದಲ್ಲಿ ಮಂಗಳಾ ಟೀಚರ್ ದುರಂತ ಅಂತ್ಯ ಕಂಡರೂ, ಸಿದ್ಲಿಂಗು 2 ನಲ್ಲಿ ಅವರು ಹೇಗೆ ಬರಲಿದ್ದಾರೆ ಎನ್ನುವ ಕುತೂಹಲವನ್ನೂ ಹುಟ್ಟಿಸಿದ್ದಾರೆ.
ಅಂದುಕೊಂಡಂತೆ ನಡೆದರೆ ಅಕ್ಟೋಬರ್ ತಿಂಗಳಿಂದ ಚಿತ್ರೀಕರಣ ಪ್ರಾರಂಭಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಸಿನಿಮಾದ ಪಾತ್ರಕ್ಕಾಗಿ ಯೋಗಿ ಹಲವು ರೀತಿಯಗಳಲ್ಲಿ ಬದಲಾಗಬೇಕಂತೆ. ಆ ಬದಲಾವಣೆಗೆ ಸಮಯ ಕೊಟ್ಟು, ಶೂಟಿಂಗ್ ಶುರು ಮಾಡುವುದಾಗಿ ವಿಜಯ್ ಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.
Web Stories