ಹೈದರಾಬಾದ್: ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರು ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ನಂತರ ಅವರು ಈಗಾಗಲೇ ಸಹಿ ಹಾಕಿರುವ `ಕ್ರಾಂತಿ ಮಾಧವ್’ ಚಿತ್ರ ಸೆಟ್ಟೆರಲಿದೆ. ಈ ಚಿತ್ರದಲ್ಲಿ ವಿಜಯ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಷಯ.
ಹೌದು. ವಿಜಯ್ ಮೊದಲ ಬಾರಿಗೆ ಇಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳು ಅವರು ಹೇಗೆ ಈ ಪಾತ್ರದಲ್ಲಿ ಮಿಂಚಲಿದ್ದಾರೆ ಎಂದು ನೋಡಲು ಕಾರರದಿಂದಿದ್ದಾರೆ. ಸದ್ಯ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ `ಗೀತ ಗೋವಿಂದಂ’ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಸಿನಿರಂಗದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಚಿತ್ರದ ಶೂಟಿಂಗ್ ಇನ್ನೇನೂ ಮುಗಿಯುವ ಹಂತಕ್ಕೆ ಬಂದಿದ್ದು, ಈ ಚಿತ್ರದ ನಂತರ ವಿಜಯ್ ದೇವರಕೊಂಡ ಅಪ್ಪನ ಪಾತ್ರದಲ್ಲಿ ನಟಿಸಲು ರೆಡಿಯಾಗಲಿದ್ದಾರೆ.
`ಡಿಯರ್ ಕಾಮ್ರೆಡ್’ ನಂತರ `ಕ್ರಾಂತಿ ಮಾಧವ್’ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ವಿಜಯ್ ಎಂಟು ವರ್ಷದ ಮಗುವಿನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕ್ರಾಂತಿ ಮಾಧವ್ ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ಕೆಲವು ನಿರೀಕ್ಷೆಗಳಿವೆ. ಯಾಕೆಂದರೆ ಅರ್ಜುನ್ ರೆಡ್ಡಿ ಬಳಿಕ ಗೀತ ಗೋವಿಂದಂ ಚಿತ್ರ ಬಿಟ್ಟರೆ ವಿಜಯ್ ದೇವರಕೊಂಡ ನಟಿಸಿದ್ದ ಇತರೇ ಚಿತ್ರಗಳು ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದ್ದರಿಂದ ಇತ್ತೀಚಿಗೆ ವಿಜಯ್ ಪಾತ್ರಗಳ ಆಯ್ಕೆ ಹಾಗೂ ಸಿನಿಮಾ ಟೀಮ್ ಬಗ್ಗೆ ಬಹಳಷ್ಟು ಯೋಚಿಸಿ ಆಯ್ಕೆ ಮಾಡುತ್ತಿದ್ದಾರಂತೆ.
ಕ್ರಾಂತಿ ಮಾಧವ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯರಾಗಿ ರಾಶಿ ಖನ್ನ, ಐಶ್ವರ್ಯ ರಾಜೇಶ್ ಹಾಗೂ ಈಜಾಬೆಲ್ಲೆ ಲೈಟೇ ಆಯ್ಕೆಯಾಗಿದ್ದಾರೆ. ಅಂದುಕೊಂಡಂತೆ ಚಿತ್ರದ ಶೂಟಿಂಗ್ ಮುಗಿದರೆ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv