ಆರ್‌ಸಿಬಿಗಾಗಿ ಬಿಡ್‌ ಮಾಡಿದಾಗ, ನನ್ನಿಂದ ಉತ್ತಮ ಆಯ್ಕೆ ಸಾಧ್ಯವಿಲ್ಲವೆಂದು ನನ್ನ ಆಂತರಿಕ ಪ್ರವೃತ್ತಿ ಹೇಳ್ತಿತ್ತು: ಮಲ್ಯ

Public TV
2 Min Read
RCB 2 1

– ಈಗ ಟ್ರೋಫಿಯತ್ತ ಹೋಗಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದ ಮಾಜಿ ಮಾಲೀಕ

ಅಹಮದಾಬಾದ್‌: ಇತ್ತೀಚೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಅಮೋಘ ಜಯದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿದ್ದನ್ನು ಹಾಡಿ ಹೊಗಳಿದ್ದ ಆರ್‌ಸಿಬಿ ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್‌ ಮಲ್ಯ (Vijay Mallya) ಇದೀಗ ಭಾವುಕ ಸಂದೇಶವೊಂದನ್ನ ಎಕ್ಸ್‌ ಖಾತೆಲ್ಲಿ ಹಂಚಿಕೊಂಡಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು (ಬುಧವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್ (Eliminator IPL 2024 )ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಬೆನ್ನಲ್ಲೇ ವಿಜಯ್‌ ಮಲ್ಯ ಭಾವುಕ ಸಂದೇಶ ಹಂಚಿಕೊಂಡಿದ್ದು, ಆರ್‌ಸಿಬಿ ಗೆಲುವಿಗಾಗಿಯೂ ಶುಭ ಹಾರೈಸಿದ್ದಾರೆ. ʻʻನಾನು ಆರ್‌ಸಿಬಿ ಫ್ರಾಂಚೈಸಿಗಾಗಿ ಮತ್ತು ವಿರಾಟ್‌ ಕೊಹ್ಲಿಗಾಗಿ ಬಿಡ್‌ ಮಾಡಿದಾಗ, ನನ್ನಿಂದ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನನ್ನ ಆಂತರಿಕ ಪ್ರವೃತ್ತಿ ಹೇಳುತ್ತಿತ್ತು. ಆದರೀಗ ಐಪಿಎಲ್‌ ಟ್ರೋಫಿಯತ್ತ ಮುನ್ನುಗಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ಹೇಳುತ್ತಿದೆ. ಆರ್‌ಸಿಬಿ ತಂಡ ಇನ್ನು ಮುಂದಕ್ಕೆ ಮತ್ತು ಎತ್ತರಕ್ಕೆ ಸಾಗಲಿ, ಶುಭವಾಗಲಿ ಎಂದು ಆರ್‌ಸಿಬಿ ತಂಡಕ್ಕೆ ಹಾರೈಸಿದ್ದಾರೆ.

RCB 3

ಇತ್ತೇಚೆಗೆ ಸಿಎಸ್‌ಕೆ ವಿರುದ್ಧ ಗೆದ್ದು ಆರ್‌ಸಿಬಿ ವಿರುದ್ಧ ಪ್ಲೇ ಆಫ್‌ ಪ್ರವೇಶಿಸಿದಾಗಲೂ, ʻʻಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಪ್ಲೇ ಆಫ್ಸ್‌ ಹಂತಕ್ಕೆ ತೇರ್ಗಡೆಯಾಗಿರುವ ಆರ್‌ಸಿಬಿ ತಂಡಕ್ಕೆ ತುಂಬುಹೃದಯದ ಧನ್ಯವಾದಗಳು. ಟೂರ್ನಿಯಲ್ಲಿ ಕೆಟ್ಟ ಆರಂಭದ ಹೊರತಾಗಿಯೂ ಅಪಾರ ಬದ್ಧತೆ ಮತ್ತು ಅಮೋಘ ಆಟದ ಮೂಲಕ ಸತತ ಗೆಲುವಿನ ಹಾದಿ ಹಿಡಿಯಲಾಗಿದೆ. ಇನ್ನೇನಿದ್ದರೂ ಇದೇ ಹಾದಿಯಲ್ಲಿ ಮುನ್ನುಗ್ಗುತ್ತಾ ಟ್ರೋಫಿ ಗೆಲ್ಲುವುದಷ್ಟೇ ಬಾಕಿʼʼ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಸತತ 6 ಸೋಲಿನ ನಂತ್ರ ಪುಟಿದೆದ್ದ ಆರ್‌ಸಿಬಿ:
ಐಪಿಎಲ್‌ 2024 ಟೂರ್ನಿಯಲ್ಲಿ ಆಡಿದ ಮೊದಲ 8 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದದ್ದು ಕೇವಲ 1 ಪಂದ್ಯ ಮಾತ್ರ. ಇದಾದ ಬಳಿಕ ಎಲ್ಲರೂ ಆರ್‌ಸಿಬಿ ಅಧ್ಯಾಯ ಮುಗಿಯಿತು ಎಂದೇ ಟೀಕಿಸತೊಡಗಿದ್ದರು. ಏಕೆಂದರೆ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿದ್ದ ಚಾಲೆಂಜರ್ಸ್‌ ಪ್ಲೇ-ಆಫ್ಸ್‌ ತಲುಪಲು ಪವಾಡ ನಡೆಯಬೇಕಿತ್ತು. ಇದ್ದ 1 ಪರ್ಸೆಂಟ್‌ ಅವಕಾಶದಲ್ಲೂ ಪ್ಲೇ-ಆಫ್ಸ್ ತಲುಪಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಆರ್‌ಸಿಬಿ, ಲೀಗ್ ಹಂತದಲ್ಲಿನ ತನ್ನ ಕಡೇ 6 ಪಂದ್ಯಗಳನ್ನು ಗೆದ್ದು ಒಟ್ಟು 14 ಅಂಕಗಳೊಂದಿಗೆ ಅಂಕಪಟ್ಟಿಯ 4ನೇ ಸ್ಥಾನದ ಮೂಲಕ ಪ್ಲೇ ಆಫ್ಸ್‌ ತಲುಪಿ ಇತಿಹಾಸ ರಚನೆ ಮಾಡಿತು.

Share This Article