ಪಂಜಾಬ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ ಆರ್‌ಸಿಬಿಗೆ ವಿಜಯ್‌ ಮಲ್ಯ ವಿಶ್

Public TV
2 Min Read
Vijaya Mallya

ಪಂಜಾಬ್‌ ವಿರುದ್ಧ ಭರ್ಜರಿ ಗೆಲವು ಸಾಧಿಸಿ ಫೈನಲ್‌ ಪ್ರವೇಶಿಸಿದ ಆರ್‌ಸಿಬಿ ತಂಡಕ್ಕೆ ಉದ್ಯಮಿ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಆರ್‌ಸಿಬಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ ನೀಡಿದೆ. ಧೈರ್ಯದಿಂದ ಆಟವಾಡಿ, ಕಪ್‌ ಗೆಲ್ಲಿ ಎಂದು ಶುಭ ಹಾರೈಸಿದ್ದಾರೆ.

rcb 4

ಐಪಿಎಲ್‌ (IPL 2025) ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಆರ್‌ಸಿಬಿ (RCB) ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 101 ರನ್‌ ಗಳಿಸಿತು. ಆರ್‌ಸಿಬಿ 10 ಓವರ್‌ಗೆ ಗುರಿ ತಲುಪಿ ಗೆದ್ದು ಬೀಗಿತು.

ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಫಿಲ್‌ ಸಾಲ್ಟ್‌ ಸ್ಫೋಟಕ ಅರ್ಧಶತಕದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. 27 ಬಾಲ್‌ಗಳಿಗೆ 6 ಫೋರ್‌, 3 ಸಿಕ್ಸರ್‌ನೊಂದಿಗೆ 56 ರನ್‌ (ಔಟಾಗದೇ) ಗಳಿಸಿ ಮಿಂಚಿದರು. ವಿರಾಟ್‌ ಕೊಹ್ಲಿ 12, ಮಯಂಕ್‌ ಅಗರ್ವಾಲ್‌ 19, ರಜತ್‌ ಪಾಟೀದಾರ್‌ 15 ರನ್‌ (ಔಟಾಗದೇ) ಗಳಿಸಿದರು. ಅಂತಿಮವಾಗಿ ಆರ್‌ಸಿಬಿ 10 ಓವರ್‌ಗೆ 2 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಜಯ ಸಾಧಿಸಿತು.

ಪ್ರಿಯಾಂಶ್ ಆರ್ಯ 7, ಜೋಶ್‌ ಇಂಗ್ಲಿಸ್‌ 4, ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ 2, ನೆಹಾಲ್ ವಧೇರಾ 8 ರನ್‌ನ ಒಂದಂಕಿ ಆಟದಿಂದ ನಿರಾಸೆ ಮೂಡಿಸಿದರು. ಪ್ರಭಸಿಮ್ರನ್ ಸಿಂಗ್ 18, ಮಾರ್ಕಸ್ ಸ್ಟೊಯಿನಿಸ್ 26, ಅಜ್ಮತುಲ್ಲಾ ಒಮರ್ಜೈ 18 ರನ್‌ಗಳಿಸಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಕೊನೆಗೆ ಪಂಜಾಬ್‌ 14.1 ಓವರ್‌ಗೆ 101 ರನ್‌ ಗಳಿಸಿ ಆಲೌಟ್‌ ಆಯಿತು.

2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್‌ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Share This Article