ಪಾನಿಪುರಿ ಮಾರುತ್ತಿದ್ದ 17ರ ಪೋರನಿಂದ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಾಧನೆ

Public TV
2 Min Read
Yashasvi Jaiswal Main

– ಸಚಿನ್, ಸೆಹ್ವಾಗ್, ರೋಹಿತ್ ಕ್ಲಬ್ ಸೇರಿದ ಜೈಸ್ವಾಲ್

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರದ ಬ್ಯಾಟ್ಸ್‍ಮನ್ ಯಶಸ್ವಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ ದ್ವಿಶತಕ ಸಿಡಿಸಿ, ವಿಶೇಷ ಸಾಧನೆ ಮಾಡಿದ್ದಾರೆ.

17 ವರ್ಷದ ಯಶಸ್ವಿ ಜೈಸ್ವಾಲ್ 154 ಎಸೆತಗಳಲ್ಲಿ 17 ಬೌಂಡರಿ ಮತ್ತು 12 ಸಿಕ್ಸರ್‌ಗಳ ಸಹಾಯದಿಂದ 203 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಸ್ಟ್ರೈಕ್ ದರ 131.81 ಆಗಿತ್ತು. ಈ ವರ್ಷದ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಖ್ಯಾತಿಗೆ ಯಶಸ್ವಿ ಪಾತ್ರರಾಗಿದ್ದಾರೆ. ಈ ಹಿಂದೆ ಕೇರಳದ ಸಂಜು ಸ್ಯಾಮ್ಸನ್ ಮತ್ತು ಉತ್ತರಾಖಂಡದ ಕರ್ಣ ಕೌಶಲ್ ದ್ವಿಶತಕ ಸಿಡಿಸಿದ್ದರು.

Yashasvi Jaiswal B

ಈ ವರ್ಷ ಗೋವಾ ವಿರುದ್ಧ ಸ್ಯಾಮ್ಸನ್ 212 ರನ್ ಗಳಿಸಿದ್ದು, ಟೂರ್ನಿಯಲ್ಲಿ ಅತಿ ದೊಡ್ಡ ಮೊತ್ತದ ಸ್ಕೋರ್ ಇದಾಗಿದೆ. ಮತ್ತೊಂದೆಡೆ ಕೌಶಲ್ ಸಿಕ್ಕಿಂ ವಿರುದ್ಧ 202 ರನ್ ಗಳಿಸಿದ್ದರು.

ಲಿಸ್ಟ್-ಎ ಟೀಂನಲ್ಲಿ ದ್ವಿಶತಕ ಬಾರಿಸಿದ ಏಳನೇ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದಾರೆ. ಈ ಹಿಂದೆ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಟೀಂ ಇಂಡಿಯಾ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಶಿಖರ್ ಧವನ್, ಕರ್ಣ ಕೌಶಲ್ ಮತ್ತು ಸ್ಯಾಮ್ಸನ್ ದ್ವಿಶತಕ ಸಾಧನೆ ಮಾಡಿದ್ದಾರೆ. ಅದರಲ್ಲೂ ಹಿಟ್‍ಮ್ಯಾನ್ ರೋಹಿತ್ ಶರ್ಮ ಅತಿ ಹೆಚ್ಚು ದ್ವಿಶತಕ ಗಳಿಸಿದ್ದಾರೆ.

Yashasvi Jaiswal

ಯಶಸ್ವಿ 12ನೇ ವಯಸ್ಸಿನಲ್ಲಿ ರಾಜ ಶಿವಾಜಿ ವಿದ್ಯಾಮಂದಿರ್ (ದಾದರ್) ವಿರುದ್ಧದ ಪಂದ್ಯದಲ್ಲಿ 319 ರನ್ ಗಳಿಸಿದ್ದರು. ಜೈಸ್ವಾಲ್ 2014ರ ಜನವರಿಯಲ್ಲಿ ಅಂಜುಮಾನ್ ಇಸ್ಲಾಂ ಪ್ರೌಢಶಾಲೆ (ಕೋಟೆ) ಪರ ಆಡುತ್ತಿದ್ದರು. ಗೈಲ್ಸ್ ಶೀಲ್ಡ್ ಸ್ಕೂಲ್ ಪಂದ್ಯದಲ್ಲಿ ಅವರು ತ್ರಿಶತಕ ಸಿಡಿಸಿದ್ದರು. ಜೊತೆಗೆ 99ರನ್ ನೀಡಿ 13 ವಿಕೆಟ್ ಪಡೆದಿದ್ದರು.

ಕೆಲವು ವರ್ಷಗಳ ಹಿಂದೆ ಮುಂಬೈನ ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿದ್ದ ಯಶಸ್ವಿ ಇಂದು ಭಾರತೀಯ ಕ್ರಿಕೆಟ್‍ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಕೇವಲ 17ನೇ ವಯಸ್ಸಿನಲ್ಲಿ, ಯಶಸ್ವಿ ದೇಶೀಯ ಕ್ರಿಕೆಟ್‍ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆದರೆ ಸೆಲೆಬ್ರಿಟಿಗಳಿಗೆ ಎಲ್ಲವೂ ಅಷ್ಟು ಸುಲಭವಲ್ಲ. ಮುಂಬೈನ ಭಾರತೀಯ ಕ್ರಿಕೆಟ್ ದೈತ್ಯರ ಮುಂದೆ ತನ್ನ ಛಾಪು ಮೂಡಿಸಲು ಯಶಸ್ವಿ 10ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಭಾದೋಹಿ ತೊರೆದಿದ್ದರು. ಆ ಬಳಿಕ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ಕ್ರಿಕೆಟಿಗನಾಗುವ ಮೂಲಕ ದೇಶಕ್ಕಾಗಿ ಆಡುವ ಕನಸು ಹೊತ್ತಿದ್ದ ಯಶಸ್ವಿ ಮುಂದೆ ಅನೇಕ ಸವಾಲುಗಳು ಎದುರಾದವು. ಆದರೆ ಎಲ್ಲವನ್ನೂ ಸ್ಥಿರವಾಗಿ ಎದುರಿಸಿದ ಯಶಸ್ವಿ ಜೈಸ್ವಾಲ್ ಮುಂಬೈನ ಬೀದಿಯ ಅಂಗಡಿಯೊಂದರಲ್ಲಿ ಪಾನಿಪುರಿ ಮಾರುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *