ನಿನ್ನೆಯಷ್ಟೇ ತೆಲುಗು ಚಿತ್ರೋದ್ಯಮದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿತ್ತು. ಅದು ಅಭಿಮಾನಿಗಳ ಗೊಂದಲಕ್ಕೂ ಕಾರಣವಾಗಿತ್ತು. ದಿಢೀರ್ ಅಂತ ವಿಜಯ್ ದೇವರಕೊಂಡ (Vijay Devarakonda) ಅವರನ್ನು ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಭೇಟಿ ಮಾಡಿದ್ದರು. ಈ ಭೇಟಿ ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಹೆಸರಾಂತ ನಿರ್ದೇಶಕರು ಹಾಗೂ ಸ್ಟಾರ್ ನಟರ ಭೇಟಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸೋದು ಸಹಜ. ಹಾಗಾಗಿಯೇ ಇಬ್ಬರ ಫ್ಯಾನ್ಸ್ ತಮಗೆ ತೋಚಿದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಇಬ್ಬರೂ ಜೊತೆಯಾಗಿ ಹೊಸ ಸಿನಿಮಾ (New movie) ಕೊಡಬಹುದಾ ಎನ್ನುವ ಪ್ರಶ್ನೆಯನ್ನು ಬಹುತೇಕರು ಮಾಡಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಸಲಾರ್ 2 ಸಿನಿಮಾ ಶುರುವಾಗಬೇಕಿತ್ತು. ಇದಾದ ನಂತರ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಪ್ರಶಾಂತ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಇವೆರಡೂ ಸಿನಿಮಾ ಸದ್ಯಕ್ಕೆ ಸಾಧ್ಯವಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದರಿಂದ ವಿಜಯ್ ಭೇಟಿ ಕುತೂಹಲ ಮೂಡಿಸಿದೆ.
ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾದಲ್ಲಿ ಹೊಸದೊಂದು ಪಾತ್ರವಿದ್ದ ಕಾರಣಕ್ಕೆ ವಿಜಯ್ ದೇವರಕೊಂಡ ಅವರನ್ನು ಪ್ರಶಾಂತ್ ಭೇಟಿಯಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾರೂ ಈ ಕುರಿತಂತೆ ಸ್ಪಷ್ಟನೆ ನೀಡಿಲ್ಲ.