ವಿಜಯಪುರ: ಅತ್ಯಾಚಾರ ನಡೆಸುವ ಆರೋಪಿಗಳ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಠಿಣವಾಗಿ ಹೇಳಿದ್ದಾರೆ.
ದಲಿತ ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯ ಹಿನ್ನೆಲೆಯಲ್ಲಿ ಸಂತ್ರಸ್ಥೆಯ ಮನೆಗೆ ಇಂದು ಭೇಟಿ ನೀಡಿದ್ದು, ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲದೇ ವೈಯಕ್ತಿಕವಾಗಿ 25,000 ರೂ. ಪರಿಹಾರ ಘೋಷಿಸಿದ್ದಾರೆ.
Advertisement
Advertisement
ಈ ಕೃತ್ಯವನ್ನು ಖಂಡಿಸಿ ಮಾತನಾಡಿದ ಅವರು, ಈ ಘಟನೆ ನೋವಿನ ಸಂಗತಿಯಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ನಗರದಲ್ಲಿ ಏನು ನಡೆಯುತ್ತಿದೆ, ಹಾಡಹಗಲೇ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾರೆ ಎಂದರೆ ಕಾನೂನು ಪರಿಸ್ಥಿತಿ ಯಾವ ರೀತಿ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶದಿಂದ ಹೇಳಿದರು.
Advertisement
ನಗರದಲ್ಲಿ ಅಫೀಮು ಹಾಗೂ ಗಾಂಜಾ ಪದಾರ್ಥ ಮಾರಾಟವಾಗುತ್ತಿದೆ. ಇದಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಬಾಲಕಿ ಶವ ಮನೆಯಲ್ಲಿ ಹೇಗೆ ಸಿಕ್ಕಿತು ಎಂದು ಪೊಲೀಸರು ತನಿಖೆ ಮಾಡಬೇಕು. ಅಲ್ಲದೆ ನಿರ್ಭಯಾ ಪ್ರಕರಣದ ಬಳಿಕ ಕ್ರಿಮಿನಲ್ ತಿದ್ದುಪಡಿ ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
Advertisement
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಅಲ್ಲದೆ ಇಂತಹ ತಪ್ಪು ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕು. ಇಂತಹ ಶಿಕ್ಷೆಯನ್ನು ಜಾರಿಗೆ ತಂದರೆ ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸಿದಂತಾಗುತ್ತದೆ. 2013 ಕ್ರಿಮಿನಲ್ ತಿದ್ದುಪಡಿ ಕಾನೂನನ್ನು ಇನ್ನೂ ಕಠಿಣ ರೀತಿಯಲ್ಲಿ ಜಾರಿಗೆ ತರಬೇಕೆಂದು ಅಧಿವೇಶನದಲ್ಲಿ ನಾನು ಆಗ್ರಹ ಮಾಡುತ್ತೇನೆ ಎಂದು ತಿಳಿಸಿದರು.
ಏನು ಕಾಯ್ದೆ ತಿದ್ದುಪಡಿಯಾಗಿದೆ?
ನಿರ್ಭಯಾ ಪ್ರಕರಣದ ಬಳಿಕ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದು ಬಾಲಾಪರಾಧಿಯನ್ನು ಅಪರಾಧಿಯನ್ನಾಗಿಸಬೇಕೆಂಬ ಕೂಗು ಎದ್ದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದೆ. ಪರಿಣಾಮ ಈಗ ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಈಗ ಪರಿಗಣಿಸಲಾಗುತ್ತದೆ.
ಇದನ್ನು ಓದಿ: ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ