ಅರುಣ್ ಅಮುಕ್ತ (Arun Amukta) ನಿರ್ದೇಶನದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಸಿನಿಮಾದ್ದು ಯುವ ಆವೇಗದ ಕಥೆ ಎಂಬ ವಿಚಾರ ಈಗಾಗಲೇ ಪಕ್ಕಾ ಆಗಿದೆ. ಈ ಹಿಂದೆ ಕಿರಿಕ್ ಪಾರ್ಟಿಯಂಥಾ ಕಾಲೇಜು ಕೇಂದ್ರಿತ ಕಥೆಯ ಸಿನಿಮಾಗಳು ದೊಡ್ಡ ಮಟ್ದಲ್ಲಿ ಗೆದ್ದಿತ್ತು. ಇತ್ತೀಚೆಗಷ್ಟೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಕೂಡಾ ಗೆದ್ದು ಬೀಗಿತ್ತು. ಇದೀಗ ಪತ್ರಿಕಾ ಗೋಷ್ಠಿಯ ಮೂಲಕ ಚಿತ್ರತಂಡ ಹಂಚಿಕೊಂಡಿರುವ ಮಾಹಿತಿಗಳನ್ನು ಗಮನಿಸಿದರೆ, ಈ ಸಿನಿಮಾ ಕೂಡಾ ಆ ಸಾಲಿಗೆ ಸೇರ್ಪಡೆಗೊಳ್ಳುತ್ತದೆ ಅನ್ನಿಸೋದರಲ್ಲಿ ಸಂದೇಹವೇನಿಲ್ಲ.
Advertisement
ಅಂದಹಾಗೆ, ಈ ಚಿತ್ರದ ಚಿತ್ರೀಕರಣವೀಗ ಮುಕ್ತಾಯಗೊಂಡಿದೆ. ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಐವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿ ಕುಂಬಳಕಾಯಿ ಒಡೆಯಲಾಗಿದೆ. ಈ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯೊಂದನ್ನು ಏರ್ಪಡಿಸಿದ್ದ ಚಿತ್ರತಂಡ ಆಯಾ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮುಖಾಮುಖಿಯಾಗಿಸಿದೆ. ಇದರ ಭಾಗವಾಗಿ ಸದರಿ ಚಿತ್ರದ ನಾಯಕರಲ್ಲೊಬ್ಬನಾಗಿ ನಟಿಸಿರುವ ಮನೋಜ್ ವಿವಾನ್ (Manoj vivan) ಕೂಡಾ, ತಮ್ಮ ಪಾತ್ರದ ಬಗ್ಗೆ, ಇಂಥಾದ್ದೊಂದು ಅವಕಾಶ ಒಲಿದು ಬಂದಿದ್ದರ ಬಗ್ಗೆ ಮಾತಾಡಿದ್ದಾರೆ. ಇದು ತನ್ನ ಜೀವಮಾನದ ಕನಸು ನನಸಾದ ಕ್ಷಣ ಅನ್ನುತ್ತಲೇ ಮಾತು ಆರಂಭಿಸಿದರು ಮನೋಜ್, ತಮ್ಮ ಏಳೂವರೆ ವರ್ಷಗಳ ಅಲೆದಾಟಗಳ ಕಥೆಯನ್ನು ಹಂಚಿಕೊಂಡಿದ್ದಾರೆ.
Advertisement
Advertisement
ನಟನಾಗಬೇಕೆಂದು ಅಲೆಯುತ್ತಿದ್ದಾಗ ಬಹುತೇಕರು ಪ್ರತಿಭೆ ಗುರುತಿಸದೆ, ಕೇವಲ ಹಣಕ್ಕೆ ಮಾತ್ರವೇ ಬೆಲೆ ಕೊಡುತ್ತಿದ್ದರು. ಆದರೆ ನಿರ್ದೇಶಕ ಅರುಣ್ ಅಮುಕ್ತ, ನಿರ್ಮಾಪಕರಾದ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಯಾವುದೇ ಅಪೇಕ್ಷೆ ಇಲ್ಲದೆ ಅವಕಾಶ ಕೊಟ್ಟಿದ್ದಾರೆಂದಿರುವ ಮನೋಜ್ ವಿವಾನ್, ಅವರೆಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ. ಇಲ್ಲಿ ಮನೋಜ್ ಪಾಲಿಗೆ ನಾನಾ ಅಂಶಗಳಿರುವ ಪ್ಯಾಕೇಜಿನಂಥಾ ಪಾತ್ರ ಸಿಕ್ಕಿದೆಯಂತೆ. ಮಾಸ್, ಹೀರೋಗಿರಿ, ವಿಲನ್ ಸೇರಿದಂತೆ ನಾನಾ ಚಹರೆಗಳು ಅವರ ಪಾತ್ರಕ್ಕಿದೆಯಂತೆ. ಇದು ಕುಟುಂಬ ಸಮೇತರಾಗಿ ನೋಡುವ ಚಿತ್ರವೆಂಬ ಭರವಸೆ ರವಾನಿಸುವ ಮೂಲಕ ಮನೋಜ್ ಗಮನ ಸೆಳೆದಿದ್ದಾರೆ.
Advertisement
ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.