– ವಾಸ್ತುಪ್ರಕಾರ ರೂಂಗಳ ಮಾರ್ಪಾಡು
ಬೆಂಗಳೂರು: ಪ್ರಚಾರ, ಮತಬೇಟೆ ಎಂದು ಇಡೀ ದೇಶದಲ್ಲಿ ಈಗ ಚುನಾವಣಾ ಜಪ ಶುರುವಾಗಿದೆ. ಈ ಮಧ್ಯೆ ರಾಜ್ಯದ ಸಚಿವರು ಮಾತ್ರ ವಿಧಾನಸೌಧ, ವಿಕಾಸಸೌಧದಲ್ಲಿ ಚೆನ್ನಾಗಿರುವ ಕೊಠಡಿಗಳನ್ನು ಕೆಡವಿ ವಾಸ್ತು ಪ್ರಕಾರ ತಮಗೆ ಬೇಕಾದ ಹಾಗೆ ರಿಪೇರಿ ಮಾಡಿಕೊಳ್ಳುತ್ತಿದ್ದಾರೆ.
ವಿಕಾಸಸೌಧದಲ್ಲಿ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಯ ಕೊಠಡಿಯಲ್ಲಿ ಹೊಸ ರೂಂಗಳ ಸೇರ್ಪಡೆಯ ಕೆಲಸ ಭರದಿಂದ ನಡೆಯುತ್ತಿದೆ. ಅಷ್ಟೇ ಅಲ್ಲದೆ ಪ್ರಭಾವಿ ಸಚಿವರೊಬ್ಬರು ಬೇರೆ ಕೊಠಡಿಯನ್ನು ನೀಡಲಾಗಿದ್ದರೂ ರೂಂ ನಂಬರ್ 338ಕ್ಕೆ ಬೇಡಿಕೆ ಇಟ್ಟು ಆ ರೂಂನ್ನು ವಾಸ್ತುಪ್ರಕಾರ ರಿಪೇರಿ ಮಾಡಿಸಿಕೊಳ್ಳುತ್ತಿದ್ದಾರೆ.
Advertisement
Advertisement
ವಿಧಾನಸೌಧ ಹಾಗೂ ವಿಕಾಸಸೌಧದ ಕೊಠಡಿಗಳನ್ನು ಯೋಜನಾಬದ್ಧವಾಗಿ ನಿರ್ಮಿಸಲಾಗಿದೆ. ಹೀಗಿದ್ದರೂ ಜನ ಪ್ರತಿನಿಧಿಗಳು ತಮಗೆ ಬೇಕಾದ ರೀತಿ ರೂಂಗಳನ್ನು ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ. ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಮೊನ್ನೆ ಮೊನ್ನೆ ನವೀಕರಿಸಿರುವ ಕೊಠಡಿಗಳನ್ನು ಮತ್ತೆ ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡುತ್ತಿದ್ದಾರೆ. ತೆರಿಗೆ ರೂಪದಲ್ಲಿ ನಾವು ಕಟ್ಟಿದ ಹಣವನ್ನು ಜನಪ್ರತಿನಿಧಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.
Advertisement
Advertisement
ಒಟ್ಟಿನಲ್ಲಿ ನೀತಿ ಸಹಿತೆ ಜಾರಿಯಾಗಿದ್ದರಿಂದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿಲ್ಲ. ಇತ್ತ ಸಚಿವರು, ಕೆಲ ಜನ ಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಜಮೀರ್ ಅಹ್ಮದ್ ಅವರ ಕಾರ್ಯದರ್ಶಿ ಹಾಗೂ ಪ್ರಭಾವಿ ಸಚಿವರೊಬ್ಬರ ಕೊಠಡಿಯ ಮಾರ್ಪಾಟು ಭರದಿಂದ ಸಾಗಿದೆ. ಜನಪ್ರತಿನಿಧಿಗಳ ಈ ವರ್ತನೆಗೆ ಜನ ಕಿಡಿಕಾರುತ್ತಿದ್ದಾರೆ.