ಬೆಂಗಳೂರು: ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಅಧಿಕಾರಿಗಳ ಸಭೆ ನಡೆಸಿ ಸಂಪೂರ್ಣ ಸ್ವಾತಂತ್ರ್ಯದ ಜತೆಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿ ಬಳಿಕ ಬಿಎಸ್ ಯಡಿಯೂರಪ್ಪ ಅವರು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಹಿಂದಿನ ಸರ್ಕಾರದಂತೆ ಯಾವುದೇ ಕೆಲಸ ತಡವಾಗುವಂತಿಲ್ಲ. ನಿಮಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತೇನೆ. ಆದರೆ ಸ್ವಾತಂತ್ರ್ಯ ದುರುಪಯೋಗವಾದರೆ ಅದಕ್ಕೆ ನೀವೇ ಜವಾಬ್ದಾರರು. ಯಾರ ಮರ್ಜಿನಿಂದ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
Advertisement
ನಾವು ರೂಪಿಸುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಬರ ಪರಿಹಾರ ಸಮರೋಪಾದಿಯಲ್ಲಿ ನಡೆಯಬೇಕು. ಮುಂಗಾರು ಪ್ರಾರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸಮಸ್ಯೆ ಆಗಬಾರದು. ಪ್ರತಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು. ಮಳೆಗಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮವಹಿಸಿ. ಎಲ್ಲೇ ಲೋಪವಾದರೂ ಅದಕ್ಕೆ ನೀವೇ ಹೊಣೆ ಎಂದು ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.
Advertisement
ಕೇಂದ್ರದಿಂದ ಸಿಗುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಕೊಡುತ್ತೇವೆ. ರೈತರಿಗೆ ಈ ಹಣ ಸಹಾಯವಾಗಲಿದೆ. ಈ ಮೂಲಕ ರೈತರಿಗೆ ಒಟ್ಟಾರೆ 10 ಸಾವಿರ ರೂ. ಸಿಗುತ್ತದೆ. ಈ ಯೋಜನೆ ರೈತರಿಗೆ ತಲುಪಬೇಕು. 15 ದಿನಕೊಮ್ಮೆ ಅಧಿಕಾರಿಗಳು ಸಭೆ ಮಾಡುವುದು ಕಡ್ಡಾಯ. ಬರ ನಿರ್ವಹಣೆ, ಮಳೆಗಾಲದ ನಿರ್ವಾಹಣೆ ಅಧಿಕಾರಿಗಳು ಸಭೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
Advertisement
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲಾಧಿಕಾರಿಗಳು 15 ದಿನಕ್ಕೊಮ್ಮೆ ಸಭೆ ಮಾಡಿ, ವಾಸ್ತವ್ಯ ಹೂಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೆ 2 ಬಾರಿ ಜಿಲ್ಲಾ ಪ್ರವಾಸ ಮಾಡಿ ಸಮಸ್ಯೆಯನ್ನು ಅವಲೋಕನ ಮಾಡಿ ಪರಿಹಾರ ಕೈಗೊಳ್ಳುವುದು ಕಡ್ಡಾಯ ಎಂದು ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಆಗಸ್ಟ್ 2 ಹಾಗೂ 3ರಂದು ಎಲ್ಲಾ ಜಿಲ್ಲಾಧಿಕಾರಿಗಳು, ಸಿಇಓಗಳ ಸಭೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಜೊತೆಗೆ ಅಧಿಕಾರಿಗಳಿಂದ ರಾಜ್ಯದ ಆರ್ಥಿಕ ಸ್ಥಿತಿಗತಿ, ಬರ ಪರಿಹಾರ, ಅತಿವೃಷ್ಟಿ, ವಿವಿಧ ಕಾಮಗಾರಿಗಳು, ಅನುದಾನ ಹಂಚಿಕೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಉಳಿದಂತೆ ಸಾಲಮನ್ನಾಕ್ಕೆ ನೀಡಲಾದ ಅನುದಾನ, ಸಾಲದ ಸ್ಥಿತಿಗತಿ, ಮೋಡ ಬಿತ್ತನೆ, ಮಳೆ ಸ್ಥಿತಿಗತಿ, ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಬಗ್ಗೆ ಅಧಿಕಾರಿಗಳಿಂದ ಯಡಿಯೂರಪ್ಪ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.