ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಟೇಪ್ ಪ್ರಕರಣ 2ನೇ ದಿನವೂ ಸದನದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವೇಳೆ ವಿಧಾನಸಭಾ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯ ಬಗ್ಗೆ ವ್ಯಂಗ್ಯ ಮಾಡಿ ಎರಡು ಪಕ್ಷಗಳ ನಾಯಕರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.
ಸದನದಲ್ಲಿ ನಡೆದ ಚರ್ಚೆ ವೇಳೆ ಸ್ಪೀಕರ್ ಅವರಿಗೆ ಎಲ್ಲಾ ಶಾಸಕರು ಕೂಡ ಬೆಂಬಲ ನೀಡುವಂತೆ ಮಾತನಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ನನ್ನ ಸದ್ಯದ ಸ್ಥಿತಿ ರೇಪ್‍ಗೆ ಒಳಗಾದವರ ಪರಿಸ್ಥಿತಿಯಂತಿದೆ. ರೇಪ್ ಆದ ವ್ಯಕ್ತಿಗೆ ಕೋರ್ಟ್ ನಲ್ಲಿ ಹೋದರೆ ಎಲ್ಲಿ ಆಯ್ತು? ಹೇಗಾಯ್ತು ಎಂದು ಪದೇ ಪದೇ ಕೇಳುತ್ತಾರೆ. ಅದೇ ರೀತಿ ನೀವೆಲ್ಲಾ ನನ್ನ ರೇಪ್ ಮಾಡುತ್ತಿದ್ದೀರಿ ಎಂದು ತಮ್ಮ ನೋವನ್ನು ಹೊರ ಹಾಕಿದರು.
ಸಭಾಧ್ಯಕ್ಷರನ್ನು ಬೀದಿಗೆ ತಂದಿದ್ದಾರೆ, ತಂದಿದ್ದಾರೆ ಎಂದು ಪದೇ ಪದೇ ಎರಡು ಪಕ್ಷಗಳು ಹೇಳುತ್ತೀದ್ದಿರಿ. ಆದರೆ ರೇಪ್ ಆದ ಪರಿಸ್ಥಿತಿ ನನಗೆ ಆಗಿದ್ದು, ಕೋರ್ಟಿನಲ್ಲಿ ವಕೀಲರು ಪದೇ ಪದೇ ಪ್ರಶ್ನೆ ಮಾಡುತ್ತಾರೆ. ಒಬ್ಬ ವ್ಯಕ್ತಿಯ ಮೇಲೆ 1 ಬಾರಿ ರೇಪ್ ಆಗಿದ್ದರೆ, ಕೋರ್ಟ್ ನಲ್ಲಿ 100 ಬಾರಿ ರೇಪ್ ಮಾಡುತ್ತಾರೆ ಎಂಬಂತೆ ನನ್ನ ಸ್ಥಿತಿಯೂ ಆಗಿದೆ ಎಂದರು.
ಆಪರೇಷನ್ ಕಮಲ ವಿಡಿಯೋ ಬಗ್ಗೆ ಸ್ಪೀಕರ್ ಗಮನಕ್ಕೆ ಮೊದಲು ತರಬೇಕಿತ್ತು. ಆದರೆ ಮಾಧ್ಯಮಗಳ ಮುಂದೇ ಸ್ಪೀಕರ್ ಬಗ್ಗೆ ಮಾತನಾಡಿ ಅವರನ್ನು ಬೀದಿಗೆ ತಂದಿದ್ದಾರೆ ಎಂದು ಬಿಜೆಪಿ ಶಾಸಕರು ಸದನದಲ್ಲಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಆರೋಪಿಸಿದರು. ಆದರೆ ಬಿಜೆಪಿ ನಾಯಕರ ಈ ಮಾತಿಗೆ ತಿರುಗೇಟು ಕೊಟ್ಟ ಸಿಎಂ ಎಚ್‍ಡಿಕೆ, ಏನೂ ತಪ್ಪು ಮಾಡಿಲ್ಲ ಅಂದರೆ ಬಿಜೆಪಿಯವರಿಗೆ ಭಯ ಏಕೆ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಆಪರೇಷನ್ ಕಮಲ ಮಾಡುತ್ತಾನೆ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾ ಬಂದಿದ್ದರು. ಆದರೆ ಸತ್ಯವನ್ನ ಜನರಿಗೆ ತೋರಿಸಬೇಕಿತ್ತಲ್ವಾ? ಅದಕ್ಕೆ ಆಡಿಯೋ ನೀಡಿದೆ. ಸ್ಪೀಕರ್ ಹೆಸರನ್ನು ಬೀದಿಗೆ ತಂದಿದ್ದು ಯಾರು? ಎನ್ನುವುದನ್ನು ಅವರೇ ಯೋಚನೆ ಮಾಡಲಿ, ನಾನೇನು ಫೋನ್ ಕದ್ದಾಲಿಕೆ ಮಾಡಿಲ್ಲ ಎಂದು ಟಾಂಗ್ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv