ಬೆಂಗಳೂರು: ನನ್ನ ವಿರುದ್ಧ ಆರೋಪ ಬಂದರೆ ನಾನು ತನಿಖೆಗೆ ಸಹಕಾರ ಮಾಡುತ್ತೇನೆಯೇ ಹೊರತು ನಿಮ್ಮಂತೆ ಪಲಾಯನವಾದ ಮಾಡಲ್ಲ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಆಪರೇಷನ್ ಕಮಲ ಆಡಿಯೋ ವಿಚಾರವಾಗಿ ಇಂದು ಕಲಾಪದಲ್ಲಿ ಮಾತನಾಡಿದ ಸಿಎಂ, ನಮ್ಮ ಶಾಸಕರನ್ನು ಬಿಜೆಪಿ ಸೇರುವಂತೆ ಕೇಳಿದ್ದು ಯಾಕೆ? ಶಾಸಕರನ್ನು ಕರೆದಿದ್ದಕ್ಕೆ ಹೋಗುವಂತೆ ಹೇಳಿದ್ದೆ. ಆದರೆ ಶಾಸಕರ ಪುತ್ರ ಬರುತ್ತಾರೆಂದು ಬಾಗಿಲು ತೆರೆದು ಕಾದಿದ್ದೇಕೆ ಎಂದು ಕುಟುಕಿದರು.
Advertisement
ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುತ್ತಾರೆ. ನಾನು ಎಂದೂ ದ್ವೇಷ ರಾಜಕಾರಣ ಮಾಡಿಲ್ಲ. ಸರ್ಕಾರದ ಮೇಲೆ ನಂಬಿಕೆಯಿಲ್ಲ, ವಿಶ್ವಾಸವಿಲ್ಲ ಎನ್ನುತ್ತಿದ್ದಾರೆ. ಈ ಹಿಂದೆ ಬಿಜೆಪಿಯವರ ಜತೆ ಸೇರಿ ಸರ್ಕಾರ ಮಾಡಿದ್ದೇನೆ. ಕೇವಲ 2 ತಿಂಗಳಲ್ಲಿ ನನ್ನ ವಿರುದ್ಧ 150 ಕೋಟಿ ರೂ. ಆರೋಪ ಮಾಡಿದ್ದರು. ಆಗಲೂ ನಾನು ಚಕಾರ ಎತ್ತಲಿಲ್ಲ. ಈಗ ನಮ್ಮ ಶಾಸಕರನ್ನು ಖರೀದಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಬಿಜೆಪಿಯ ವಿಜುಗೌಡ ಪಾಟೀಲ್ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ನನ್ನ ಮನೆಯೊಳಗೆ ಪಕ್ಷದ ಕಾರ್ಯಕರ್ತರ ಜೊತೆ ನಡೆದಿದ್ದ ಚರ್ಚೆ ಅದು. ನನಗೆ ಹಣ ನೀಡಬೇಕೆಂದು ಕೇಳಿಕೊಂಡಿಲ್ಲ. ಆಪರೇಷನ್ ಕಮಲ ಆಡಿಯೋವನ್ನು ಸಿಡಿಗೆ ಯಾಕೆ ಹೋಲಿಕೆ ಮಾಡುತ್ತೀರಿ. 2014ರಿಂದ ಯಾಕೆ ತನಿಖೆ ಮಾಡಲಿಲ್ಲ. ಸಿಡಿ ಬಗ್ಗೆ ಚರ್ಚೆ ಮಾಡುವುದಾದರೆ ನಾನು ಸಿದ್ಧ, ತನಿಖೆಗೂ ಸಹಕಾರ ನೀಡುತ್ತೇನೆ ಎಂದು ಗುಡುಗಿದರು.
Advertisement
ಶಾಸಕರನ್ನು ಖರೀದಿ ಮಾಡಲು ಆರಂಭಿಸಿದ್ದು ಯಾರು? ಸಂಕ್ರಾಂತಿ, ಯುಗಾದಿ ಎಂದು ಗಡುವು ಕೊಟ್ಟಿದ್ದರು ಯಾರು ಎಂದು ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಕುಟುಕಿದರು.
ನನ್ನ ಮೇಲೆ ನಂಬಿಕೆ ಇಲ್ಲವೆನ್ನುತ್ತಾರೆ. ನಮ್ಮ ಪಕ್ಷದ ಶಾಸಕರು ಮುಂಬೈನಲ್ಲಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆ ಎನ್ನುವುದು ನನಗೆ ಗೊತ್ತಾಗಿದೆ. ಆದರೂ ನಾನು ಚರ್ಚೆ ಮಾಡಿಲ್ಲ. ನೀವು ಈ ದೇಶದ ವ್ಯವಸ್ಥೆಯನ್ನು ಹೇಗೆ ತೆಗೆದುಕೊಂಡು ಹೋಗುತ್ತಿದ್ದೀರಿ? ನೀವು ಇಷ್ಟ ಬಂದ ಹಾಗೆ ಮಾತನಾಡಬಹುದು. ನಾವು ಮಾತನಾಡುವ ಹಾಗಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.
ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ನಾನು ಬಿಜೆಪಿಯವರ ಬಳಿ ಕಳಿಸಿಲ್ಲ. ಬಿಜೆಪಿಯವರೇ 25 ಬಾರಿ ಶರಣಗೌಡ ಅವರಿಗೆ ಫೋನ್ ಮಾಡಿ ಒತ್ತಡ ಹಾಕಿ ಪಕ್ಷಕ್ಕೆ ಬರುವಂತೆ ಕೇಳಿದ್ದಾರೆ. ಈ ಕುರಿತು ಶರಣಗೌಡ ಅವರು ನನಗೆ ಫೋನ್ ಮಾಡಿ ತಿಳಿಸಿದ್ದಾರೆ. ಅದಕ್ಕೆ ನಾನು ಹೋಗಿ ಬಾ ಅಂತ ಹೇಳಿ ಕಳುಹಿಸಿದ್ದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv