ಬೆಂಗಳೂರು: ರಾಜ್ಯದಲ್ಲಿ ಸ್ಥಾಪನೆ ಆಗುವ ಯಾವುದೇ ಕೈಗಾರಿಕೆಗಳಲ್ಲಿ 80% ಉದ್ಯೋಗ ಕನ್ನಡಿಗರಿಗೇ ನೀಡಬೇಕು. ಇಲ್ಲದೆ ಹೋದರೆ ಅಂತ ಕೈಗಾರಿಕೆಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದರು.
ವಿಧಾನಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮಂಜೇಗೌಡ ವಿಷಯ ಪ್ರಸ್ತಾಪ ಮಾಡಿದರು. ಸರ್ಕಾರ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಕೈಗಾರಿಕೆ ಸ್ಥಾಪನೆ ಮಾಡಬೇಕು. ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಈಗಿರುವ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಎರಡು ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇವೆ. ಹೀಗಾಗಿ ಕೈಗಾರಿಕೆಗಳನ್ನು ಹೆಚ್ಚು ಸ್ಥಾಪನೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಮುರುಗೇಶ್ ನಿರಾಣಿ, ಈಗಾಗಲೇ ಒನ್ ಡಿಸ್ಟ್ರಿಕ್ಟ್ ಒನ್ ಇಂಡಸ್ಟ್ರಿ ಅನ್ನೋ ಯೋಜನೆ ಇಲಾಖೆಯಲ್ಲಿ ಜಾರಿ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಂದು ಇಂಡಸ್ಟ್ರಿ ಆದರೂ ಇರಬೇಕು ಎನ್ನುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ
ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಕೈಗಾರಿಕೆ ಸ್ಥಾಪನೆಗೂ ಇಲಾಖೆ ಕ್ರಮವಹಿಸುತ್ತಿದೆ. ಟಯರ್ 2 ಸಿಟಿಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದರೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತದೆ. ಯಾರಾದ್ರು ಕೈಗಾರಿಕೆ ಪ್ರಾರಂಭಕ್ಕೆ ಮುಂದೆ ಬಂದರೆ ಅನುಮತಿ ನೀಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸರೋಜಿನಿ ಮಹಿಷಿ ವರದಿ ಅನ್ವಯ, ಕೈಗಾರಿಕೆಗಳಲ್ಲಿ 80% ಉದ್ಯೋಗ ಕನ್ನಡಿಗರಿಗೆ ಕೊಡಬೇಕು. ಯಾವುದೇ ಕೈಗಾರಿಕೆಗಳು, ಕಾರ್ಖಾನೆಗಳು ಕನ್ನಡಿಗರಿಗೆ ಉದ್ಯೋಗ ನೀಡದೇ ಹೋಗಿರುವ ಮಾಹಿತಿ ಕೊಟ್ಟರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು: ರಾಜುಗೌಡ ಆಕ್ರೋಶ