ಬೆಂಗಳೂರು: ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನ. ಇಂದು ಅಳೆದುತೂಗಿ ಕಾಂಗ್ರೆಸ್ 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮೇಲ್ಮನೆ ವಿಪಕ್ಷ ನಾಯಕರಾಗಿದ್ದ ಎಸ್‍ಆರ್ ಪಾಟೀಲ್‍ಗೆ ವಿಜಯಪುರ-ಬಾಗಲಕೋಟೆ ಅವಳಿ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಇಲ್ಲಿ ಎಂಬಿ ಪಾಟೀಲ್ ಮೇಲುಗೈ ಸಾಧಿಸಿದ್ದಾರೆ. ಸಹೋದರ ಸುನೀಲ್ ಗೌಡ ಪಾಟೀಲ್‍ಗೆ ಟಿಕೆಟ್ ಸಿಕ್ಕಿದೆ.
ಇತ್ತ ನಿರೀಕ್ಷೆಯಂತೆ ಲಕ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿ ಹೋಳಿಗೆ ಟಿಕೆಟ್ ನೀಡಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಹಾಸನದ ಬಿಜೆಪಿ ಮುಖಂಡ ಎ ಮಂಜು ಪುತ್ರ ಮಂಥರ್‍ಗೌಡಗೆ ಕಾಂಗ್ರೆಸ್ ಮಡಿಕೇರಿ ಟಿಕೆಟ್ ನೀಡಿದೆ. ಸಚಿವ ಎಸ್.ಟಿ.ಸೋಮಶೇಖರ್ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ದಿನೇಶ್ ಗೂಳಿಗೌಡಗೂ ಕಾಂಗ್ರೆಸ್ ಮಣೆ ಹಾಕಿದೆ. ಬಳ್ಳಾರಿಯ ಸ್ಥಳೀಯ ಶಾಸಕರ ವಿರೋಧದ ನಡ್ವೆಯೂ ಕೆಸಿ ಕೊಂಡಯ್ಯ ಟಿಕೆಟ್ ಸಂಪಾದಿಸಿದ್ದಾರೆ. ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಮೇಲುಗೈ ಸಾಧಿಸಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆ- ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ
ಮೈಸೂರಲ್ಲಿ ಧರ್ಮಸೇನಾಗೆ ಟಿಕೆಟ್ ತಪ್ಪಿದ್ದು, ಡಿಕೆಶಿ ಆಪ್ತ ತಿಮ್ಮಯ್ಯಗೆ ಟಿಕೆಟ್ ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ದಕ್ಷಿಣ ಕನ್ನಡದಿಂದ ಮಂಜುನಾಥ ಭಂಡಾರಿ, ಉತ್ತರ ಕನ್ನಡದಿಂದ ಭೀಮಣ್ಣ ನಾಯ್ಕ್, ಚಿತ್ರದುರ್ಗದಿಂದ ಬಿ ಸೋಮಶೇಖರ್, ಶಿವಮೊಗ್ಗದಿಂದ ಪ್ರಸನ್ನಕುಮಾರ್, ತುಮಕೂರಿನಿಂದ ಆರ್ ರಾಜೇಂದ್ರ, ಚಿಕ್ಕಮಗಳೂರಿನಿಂದ ಗಾಯತ್ರಿ ಶಾಂತೆಗೌಡ, ಬೆಂಗಳೂರು ಗ್ರಾಮಾಂತರದಿಂದ ಡಿಕೆಶಿ ಸಂಬಂಧಿ ಎಸ್ ರವಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಅಲ್ಲ, ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವ: ಕಿಮ್ಮನೆ ರತ್ನಾಕರ್
ಸದ್ಯ ಬೆಂಗಳೂರು ನಗರ, ಬೀದರ್ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಣೆ ಆಗಬೇಕಿದೆ. ಐದು ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಬ್ಬೊಬ್ಬ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತಾಡಿ, ಯಾರಾದ್ರು ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರೆ, ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.