ಚಿಕ್ಕಮಗಳೂರು: ಮೂರು ವರ್ಷಗಳ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿ (Vidhana Parishad Election) ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡರನ್ನು (Gayathri Shanthegowda) 6 ಮತಗಳಿಂದ ಸೋಲಿಸಿ ಉಪ ಸಭಾಪತಿ ಸ್ಥಾನ ಅಲಂಕರಿಸಿದ್ದ ಎಂ.ಕೆ.ಪ್ರಾಣೇಶ್‍ಗೆ (MK Pranesh) ಸಂಕಷ್ಟ ಎದುರಾಗಿದ್ದು ಹೈಕೋರ್ಟ್ (High Court) ಮರು ಮತ ಎಣಿಕೆಗೆ ಆದೇಶ ನೀಡಿದೆ.
ಮೂರು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್ಸಿನಿಂದ ಗಾಯತ್ರಿ ಶಾಂತೇಗೌಡ ಸ್ಪರ್ಧಿಸಿದ್ದರು. ಆದರೆ ತೀವ್ರ ಹಣಾಹಣಿಯಲ್ಲಿ ಪ್ರಾಣೇಶ್ ಕಾಂಗ್ರೆಸ್ಸಿನ ಗಾಯತ್ರಿ ಶಾಂತೇಗೌಡರನ್ನ 6 ಮತಗಳಿಂದ ಸೋಲಿಸಿದ್ದರು.
ಈ ಚುನಾವಣೆಯಲ್ಲಿ ಮತದಾನ ಮಾಡಿದ್ದ 12 ನಾಮ ನಿರ್ದೇಶಿತ ಸದಸ್ಯರ ಮತವನ್ನು ಅಸಿಂಧು ಮಾಡಬೇಕೆಂದು ಗಾಯತ್ರಿ ಶಾಂತೇಗೌಡ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಸೋಲು-ಗೆಲುವು ಕೋರ್ಟ್ ಮೇಟ್ಟಿಲೇರಿ ಸುಪ್ರೀಂ ಕೋರ್ಟ್ ಕದ ಕೂಡ ಬಡಿದಿತ್ತು. ಸುಪ್ರೀಂ ಕೋರ್ಟ್ (Supreme Court) ಕೂಡ ಸೋಲು-ಗೆಲುವನ್ನು ಹೈಕೋರ್ಟಿನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: Kumbh Mela Stampede | ಇಂದು ಸಂಜೆ ದೆಹಲಿಯಿಂದ ಬೆಳಗಾವಿಗೆ ಬರಲಿದೆ ನಾಲ್ವರ ಶವ
ಸುಪ್ರೀಂ ಸೂಚನೆಯ ನಂತರ ಸುದೀರ್ಘ ವಿಚಾರಣೆಯ ಬಳಿಕ ಹೈಕೋರ್ಟ್ 12 ಜನ ಸರ್ಕಾರದ ನಾಮ ನಿರ್ದೇಶಿತ ಸದಸ್ಯರ ಮತವನ್ನ ಬಿಟ್ಟು ಮರು ಮತ ಏಣಿಕೆ ಮಾಡಿ ಮಾರ್ಚ್ 7ರ ಒಳಗೆ ಹೈಕೋರ್ಟಿಗೆ ವರದಿ ನೀಡುವಂತೆ ಆದೇಶಿಸಿದೆ. ಮರು ಮತ ಎಣಿಕೆ ನಡೆದರೆ ಗಾಯತ್ರಿ ಶಾಂತೇಗೌಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಹೋಗಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.