– ಮಾಜಿ-ಹಾಲಿ ಸ್ಪೀಕರ್ ವಾಕ್ ಸಮರ
– ರಮೇಶ್ ಕುಮಾರ್ ಏನ್ ಹೇಳುತ್ತಾರೋ ಅದೇ ಸರ್ವಶ್ರೇಷ್ಠ
– ಸದನದಲ್ಲಿ ಕಿಡಿಕಾರಿದ ಈಶ್ವರಪ್ಪ
ಬೆಂಗಳೂರು: ವಿಧಾನಸಭಾ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಹಾಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ವಾಕ್ ಸಮರವೇ ನಡೆಯಿತು.
ನೆರೆ ಪರಿಹಾರ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುದೀರ್ಘ ಚರ್ಚೆ ನಡೆಸಿದರು. ಇದರಿಂದಾಗಿ ಸ್ಪೀಕರ್ ಕಾಗೇರಿ ಆಗಾಗ ಸಾಕು ಚರ್ಚೆ ನಿಲ್ಲಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ ಅವರು ಮಾತು ಮುಂದುವರಿಸಿದರು.
Advertisement
Advertisement
ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಳ್ಳುವ ತಾಯಿ ಹೃದಯದ ನಾಯಕರು ಬೇಕಾಗಿದ್ದಾರೆ. ಆದಷ್ಟು ಬೇಗ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ಸ್ಪೀಕರ್ ಕಾಗೇರಿ ಅವರು ಮತ್ತೆ ಸಾಕು ನಿಮ್ಮ ಮಾತು ನಿಲ್ಲಿಸಿ ಎಂದು ಸೂಚನೆ ನೀಡಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ, ನೀವು ಈ ರೀತಿ ಮಾತು ನಿಲ್ಲಿಸಿ ಎಂದು ಪದೇ ಪದೇ ಹೇಳುವುದು ಸರಿಯಲ್ಲ. ನಾನು ವಿಪಕ್ಷ ನಾಯಕ ಕೊನೆಗೆ ಬಂದಿದ್ದೇನೆ, ಮಾತನಾಡುತ್ತೇನೆ ಅಂತ ಗುಡುಗಿದರು.
Advertisement
ಸರಿ, ಸರಿ ಎನ್ನುತ್ತಲೇ ಸ್ಪೀಕರ್, ನೀವು ಇಷ್ಟುದ್ದ ಮಾತನಾಡಬಾರದು ಎಂದು ಹೇಳಿದರು. ಸ್ಪೀಕರ್ ಕಾಗೇರಿ ಅವರನಡೆಯಿಂದ ಗರಂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯನವರೇ ಸ್ಪೀಕರ್ ಅವರಿಂದ ಕುಳಿತುಕೊಳ್ಳುವಂತೆ ಆದೇಶ ಬಂದರೇ ಸಾಕು ಕುಳಿತುಬಿಡಿ. ಇದು ಸರಿಯಾದ ವಿಧಾನ ಎಂದು ಕುಟುಕಿದರು.
Advertisement
ಸ್ಪೀಕರ್ ಚೇರ್‍ಗೆ ನಮ್ರತೆ ಇರುತ್ತದೆ. ನೀವು ಈ ರೀತಿ ಕುಳಿತುಕೊಳ್ಳಿ ಅಂತ ಪದೇ ಪದೇ ಹೇಳುವುದು ಸರಿಯಲ್ಲ ಎಂದು ರಮೇಶ್ ಕುಮಾರ್ ಧ್ವನಿ ಏರಿಸಿದರು. ಆಗ ಕಾಗೇರಿ, ಸ್ಪೀಕರ್ ಸ್ಥಾನದಿಂದ ಬಂದ ಸೂಚನೆಯನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿರುಗೇಟು ನೀಡಿದರು. ವಾಕ್ ಸಮರ ಜೋರಾಗುತ್ತಿದ್ದಂತೆ, ನಾನು ಯಾವತ್ತೂ ಯಾವುದೇ ವಿರೋಧ ಪಕ್ಷದ ನಾಯಕರಿಗೂ ಮಾತು ಮುಗಿಸಿ ಎಂದು ಒತ್ತಾಯ ಮಾಡಿಲ್ಲ ಅಂತ ರಮೇಶ್ ಕುಮಾರ್ ಕುಟುಕಿದರು.
ಹೌದ.. ಹೌದು.. ಇಲ್ಲಿ ಕುಳಿತವರು ಯಾವ ಸಂದರ್ಭದಲ್ಲಿ ವಿಪಕ್ಷ ನಾಯಕರನ್ನು ಎಷ್ಟು ಬಾರಿ ಹೇಳಿ ಕೂರಿಸಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ. ಕೇವಲ ಬುದ್ಧಿವಂತಿಕೆ ಪ್ರದರ್ಶನ ಮಾಡಲಿಕ್ಕೆ ಸ್ಪೀಕರ್ ಚೇರ್ ಇಲ್ಲ. ಇಲ್ಲಿ ಬಂದು ಯಾರು ಎಷ್ಟು ಬುದ್ಧಿವಂತಿಕೆ ತೋರಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ ಎಂದು ಕಾಗೇರಿ, ರಮೇಶ್ ಕುಮಾರ್ ಅವರಿಗೆ ಟಾಂಗ್ ಕೊಟ್ಟರು.
ಈ ಬೆಳವಣಿಗೆಯಿಂದಾಗಿ ಸದನದಲ್ಲಿ ಗಲಾಟೆ ಆರಂಭವಾಯಿತು. ತಕ್ಷಣವೇ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ರಮೇಶ್ ಕುಮಾರ್ ಏನು ಹೇಳುತ್ತಾರೋ ಅದೇ ಸರ್ವಶ್ರೇಷ್ಠ. ಅಧ್ಯಕ್ಷ ಸ್ಥಾನದಲ್ಲಿ ಕುಳಿತಾಗ ಒಂದು ಮಾತು, ಕೆಳಗೆ ಕುಳಿತಾಗ ಮತ್ತೊಂದು ಮಾತು ಎಂದು ಕಿಡಿಕಾರಿದರು. ಈ ಮಧ್ಯೆ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯನವರೇ ನೀವು ಮಾತು ಮುಂದುವರಿಸಿ, ನನಗೆ ಸಮಯ ಮುಖ್ಯ ಎಂದು ಸೂಚನೆ ನೀಡಿದರು.
ಅದು ವಿಪಕ್ಷ ಸ್ಥಾನವೇ ಹೊರತು ಸಿದ್ದರಾಮಯ್ಯ ಅಲ್ಲ. ಈ ರೀತಿ ಸಮಯ ಹಾಗೂ ಆಮೇಲೆ ಮಾತನಾಡಿ ಎನ್ನುವುದು ಸರಿಲ್ಲ ಎಂದು ರಮೇಶ್ ಕುಮಾರ್ ಮತ್ತೆ ಗುಡುಗಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸ್ಪೀಕರ್, ರಮೇಶ್ ಕುಮಾರ್ ಅವರೇ ನೀವು ಅಲ್ಲಿ ಕುಳಿತು ಹೇಳಬೇಡಿ. ನಿಯಮಾವಳಿ ಪುಸ್ತಕ ನನ್ನ ಬಳಿಯೇ ಇದೆ. ಎಲ್ಲವನ್ನೂ ನಿಮಗೆ ಹೇಳಿದ್ದೇನೆ ಅಂತ ಯಾಕೆ ಹೆಗಲು ತಟ್ಟಿಕೊಳ್ಳುತ್ತೀರಿ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯನವರೇ ನೀವು ಮಾತನಾಡಿ. ನೀವು ಒಬ್ಬರೇ 5 ಗಂಟೆಗಳ ಕಾಲ ಮಾತನಾಡಿದರೆ ಉಳಿದವರಿಗೆ ಅವಕಾಶ ಸಿಗುತ್ತಾ? ಮಾತನಾಡಬೇಕು ಎನ್ನುವವರಿಗೆ ಏನು ಹೇಳಲಿ ಎಂದು ಸ್ಪೀಕರ್ ಅಸಮಾಧಾನ ಹೊರ ಹಾಕಿದರು.