Connect with us

Districts

ಸಿದ್ದರಾಮಯ್ಯ ಲಾಯರ್, ಬಿ.ಸಿ.ಪಾಟೀಲ್ ಪೊಲೀಸ್: ಸದನದಲ್ಲಿ ಸ್ವಾರಸ್ಯಕರ ಚರ್ಚೆ

Published

on

– ನಾನು ಸಂಡೆ ಮಂಡೆ ಲಾಯರ್: ಸಿದ್ದರಾಮಯ್ಯ

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲಾಯರ್‌ಗಿರಿ ಬಗ್ಗೆ ನಡೆದ ಚರ್ಚೆಗೆ ಇಡೀ ಸದನ ನಗೆಗಡಲಲ್ಲಿ ತೇಲಿತು. ನಾನು ಪೂರ್ಣವಾಗಿ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಚರ್ಚೆಯ ದಿಕ್ಕೇ ಬದಲಾಗಿಹೋಯಿತು.

ವಿಧಾನಸಭೆಯಲ್ಲಿ ಸಚಿವ ಸುಧಾಕರ್ ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ಮಾಡಿದ್ದಾರೆ ಎಂದು ಹಕ್ಕುಚ್ಯುತಿ ಪ್ರಸ್ತಾಪ ಮಾಡಿ ಸಿದ್ದರಾಮಯ್ಯ ಮಾತನಾಡಿದರು. ಸುಪ್ರಿಂಕೋರ್ಟ್ ತೀರ್ಪಿನಲ್ಲಿ ಹಾಗೆಂದು ಹೇಳಲಾಗಿದೆ ಎಂದು ಸುಧಾಕರ್ ಹೇಳಿದರು ಎಂಬ ಅಂಶವನ್ನು ಬಿಟ್ಟು ಸಿದ್ದರಾಮಯ್ಯ ಹಿಂದಿನ ಸುಧಾಕರ್ ಹೇಳಿಕೆಯನ್ನ ಉಲ್ಲೇಖಿಸಿದು. ಇದಕ್ಕೆ ಸಚಿವ ಡಾ. ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದಾಗ ಮೊದಲು ಆ ವಾಕ್ಯವೇ ನನ್ನ ಪುಟದಲ್ಲಿ ಇಲ್ಲ ಎಂದ ಸಿದ್ದರಾಮಯ್ಯ, ಬಳಿಕ ಸ್ಪೀಕರ್ ಈ ವಾಕ್ಯ ನಿಮ್ಮ ದಾಖಲೆಯಲ್ಲಿಯೂ ಇದೆ ಓದಿ ಎಂದರು. ಆಗ ಜಾಣತನ ಮೆರೆದ ಸಿದ್ದರಾಮಯ್ಯ, ವಿಧಾನಸಭೆ ಕಡತದ ದಾಖಲೆಯಲ್ಲಿ ಇಂಗ್ಲೀಷ್‍ಗೂ ಮೊದಲು ಕನ್ನಡದಲ್ಲಿ ಇದ್ದಿದ್ದರಿಂದ ತಾವು ನೋಡಲಿಲ್ಲ, ಉದ್ದೇಶಪೂರ್ವಕವಾಗಿ ಆ ಸಾಲು ಬಿಟ್ಟು ಓದಿಲ್ಲ ಎಂದರು.

ಈ ವೇಳೆ ಜಗದೀಶ್ ಶೆಟ್ಟರ್ ಮಧ್ಯಪ್ರವೇಶ ಮಾಡಿ ನೀವು ಗುಡ್ ಲಾಯರ್ ಚೆನ್ನಾಗಿ ಡಿಫೆನ್ಸ್ ಮಾಡ್ತೀರಿ ಅಂತ ಕೆಣಕಿದರು. ಅಯ್ಯೋ ಶೆಟ್ರೆ, ನಾನು ಪೂರ್ಣ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಆಗಿದ್ದೆ. ಅರ್ಧ ರಾಜಕಾರಣ, ಅರ್ಧ ಲಾಯರ್ ಕೆಲಸ ಆಗಿತ್ತು. ಬೆಳಗ್ಗೆ ತಾಲೂಕು ಆಫೀಸ್‍ಗೆ ಹೋಗೋದು, ಮಧ್ಯಾಹ್ನ ಲಾಯರ್ ಕೆಲಸ ಮಾಡೋದು ಆಗಿತ್ತು. ನಾನು ಲಾಯರ್ ಆಗಿದ್ದಿದ್ದರೆ ಜೀವನ ಬೇರೆಯ ರೀತಿಯೇ ಆಗಿರುತ್ತಿತ್ತು ಎಂದು ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

ಈ ನಡುವೆ ಸಂಡೆಮಂಡೆ ಲಾಯರ್ ಎಂಬ ಪದ ಬಳಕೆಗೆ ಮಾಜಿ ಸ್ಪೀಕರ್ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಲಾಯರ್ ವೃತ್ತಿ ಗೌರವಯುತ ವೃತ್ತಿ. ಹಾಗೆ ಹೇಳಬಾರದು ಎಂದರು. ಇದು ನನಗೆ ನಾನೇ ಹೇಳಿಕೊಂಡಿದ್ದು. ನಾನು ಸಂಡೆಮಂಡೆ ಲಾಯರ್ರೇ ಆಗಿದ್ದು. ಈಗ ಲಾಯರ್ ಆಗಿ ಉಳಿದಿಲ್ಲ, ಮುಖ್ಯಮಂತ್ರಿ ಆದ ಮೇಲೆ ಆ ಸನ್ನದನ್ನೇ ರದ್ದು ಮಾಡಿಸಿದ್ದೆ. ಆದರೂ ಅವರ ಖುಷಿಗಾಗಿ ಸಂಡೆ ಮಂಡೆ ಲಾಯರ್ ಎಂಬ ಶಬ್ದ ಕಡತದಿಂದ ತೆಗೆದು ಹಾಕಿ ಎಂದು ಸಿದ್ದರಾಮಯ್ಯ ಮಾಡಿದರು.

ಇದೇ ವೇಳೆ ಬೋಪಯ್ಯ ಮಾತಿಗೆ ಬಿ.ಸಿ.ಪಾಟೀಲ್ ಧ್ವನಿಗೂಡಿಸುತ್ತಿದ್ದಾಗ ಏಯ್, ನೀನು ಲಾಯರ್ ಅಲ್ಲ. ಸುಮ್ನಿರಪ್ಪ ನೀನು ಪೊಲೀಸ್ ಅಷ್ಟೇ, ಲಾಯರ್ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸರ್, ನಾನು ಪೊಲೀಸ್ ಆಗಿದ್ದೆ. ಆಗ ನನಗೆ ಲಾಯರ್ ಗಳ ಒಡನಾಟ ಇತ್ತು. ಸಂಡೆ ಲಾಯರ್ ಅಂತ ಮಾತ್ರ ಹೇಳುತ್ತಾರೆ. ಆದರೆ ಸಂಡೇ ಮಂಡೇ ಲಾಯರ್ ಅಂತ ಹೇಳಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.

Click to comment

Leave a Reply

Your email address will not be published. Required fields are marked *