ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಮಂಗಳವಾರ ನೇಚರ್ ಕಾಲ್ ಕುರಿತ ಸ್ವಾರಸ್ಯಕರ ಚರ್ಚೆ ನಡೆಯಿತು. ಚುನಾವಣಾ ಸಮಯದಲ್ಲಿ ನೀತಿಸಂಹಿತೆ ಜಾರಿ ಹೆಸರಲ್ಲಿ ನೇಚರ್ ಕಾಲ್‍ಗೂ ಅವ್ಯವಸ್ಥೆ ಪಡುವ ಸ್ಥಿತಿ ರಾಜಕಾರಣಿಗಳಿಗೆ ಇದೆ ಅಂತ ಅಧಿಕಾರಿಗಳ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಬೆಳಗಿನ ಕಲಾಪದಲ್ಲಿ ಸಂವಿಧಾನದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು. ಪ್ರಾರಂಭಿಕರಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಕಾರ್ಯಾಂಗದಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚಲ್ಲಿದರು. ಚುನಾವಣೆಗಳು ಬಂದರೆ ನಾವೆಲ್ಲಾ ವಿಲನ್ ಗಳಾಗುತ್ತೇವೆ. ನೀತಿ ಸಂಹಿತೆ ಹೆಸರಿನಲ್ಲಿ ನಮಗೆ ಸಾಕಷ್ಟು ಸಮಸ್ಯೆಗಳನ್ನು ಕೊಡಲಾಗುತ್ತೆ ಅಂತ ತಿಳಿಸಿದರು.
Advertisement
Advertisement
ಮಾಧುಸ್ವಾಮಿ ಅವರು ತಮ್ಮ ಅನುಭವವನ್ನು ತಿಳಿಸುವ ಮೂಲಕ ಸದನವನ್ನ ನಗೆಗಡಲಲ್ಲಿ ತೋಲುವಂತೆ ಮಾಡಿತು. ಚಿಕ್ಕನಾಯಕನಹಳ್ಳಿಯಲ್ಲಿ ನನಗೆ ಮನೆ ಇಲ್ಲ. ಐಬಿಯಲ್ಲಿ ಇರುತ್ತಿದ್ದೆ. ಆದರೆ ಚುನಾವಣೆ ನೀತಿ ಸಂಹಿತೆ ವೇಳೆ ನನಗೆ ಐಬಿಯಲ್ಲಿ ಇರಲು ಬಿಡಲಿಲ್ಲ. ಕನಿಷ್ಠ ಶೌಚಾಲಯ ಬಳಸಲು ಅವಕಾಶ ಕೊಡಲಿಲ್ಲ ಅಂತ ತಮ್ಮ ನೋವು ಹೇಳಿಕೊಂಡರು. ಅಷ್ಟೇ ಅಲ್ಲದೆ ದೇವಸ್ಥಾನದಲ್ಲಿ ದಕ್ಷಿಣೆ ಹಾಕುವಂತಿಲ್ಲ. ಹಾಕಿದರೆ ದೊಡ್ಡ ಅಪರಾಧ ಎನ್ನುವಂತೆ ಬಿಂಬಿಸಲಾಗುತ್ತದೆ. ಇದರ ಜೊತೆಗೆ ಕಾರುಗಳಲ್ಲಿ ತೆರಳು ಅವಕಾಶ ನೀಡಲ್ಲ. ಉಪ ಚುನಾವಣೆ ವೇಳೆ ಮೈಸೂರಿಗೆ ಹೋಗಲು ಮಂಡ್ಯದಲ್ಲೇ ನನ್ನನ್ನು ತಡೆದರು. ಎಲ್ಲಿಯೂ ನಡುವೆ ಕಾರು ನಿಲ್ಲಿಸಲ್ಲ ಎಂದರೂ ಅವಕಾಶ ನೀಡಲಿಲ್ಲ. ನೀತಿ ಸಂಹಿತೆ ಇರುವುದು ಅಧಿಕಾರದಲ್ಲಿ ಇರುವವರು ಅಧಿಕಾರ ದುರ್ಬಳಕೆ ಮಾಡಿ ಮತದಾರರ ಸೆಳೆಯುವಂತಿಲ್ಲ ಎನ್ನುವುದಕ್ಕೆ. ಆದರೆ ಅದನ್ನು ಬೇರೆ ತರ ಬದಲಿಸಿಕೊಂಡಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಇದಕ್ಕೆ ದನಿಗೂಡಿಸಿದ ಸಚಿವ ಜಗದೀಶ್ ಶೆಟ್ಟರ್, ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಚುನಾವಣಾ ಸಭೆ ನಡೆಸಿದೆ. ನಂತರ ನೇಚರ್ ಕಾಲ್‍ಗೆ ಹೋಗಬೇಕಾಯಿತು. ಅಲ್ಲಿ ಸಮೀಪ ಎಲ್ಲೂ ವ್ಯವಸ್ಥೆ ಇರಲಿಲ್ಲ. ಸಾರ್ವಜನಿಕ ಸಭೆ ಹಿಂದಿನ ಸರ್ಕಾರಿ ಶಾಲೆಯಲ್ಲಿ ಅವಕಾಶ ಇತ್ತು. ಆದರೆ ಮೂತ್ರ ವಿಸರ್ಜನೆಗೆ ಹೋಗಲು ಹಾಲಿ ಸಿಎಂ ಆಗಿದ್ದ ನನಗೂ ಅಂದು ಅವಕಾಶ ಕೊಡಲಿಲ್ಲ. ನಂತರ ಪರಿಚಿತರೊಬ್ಬರು ಅವರ ಮನೆಗೆ ಕರೆದುಕೊಂಡು ಅಂತ ತಮ್ಮ ಫಜೀತಿ ಹೇಳಿಕೊಂಡರು.
ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಕೂಡ ನೇಚರ್ ಕಾಲ್‍ಗೆ ಪಜೀತಿ ಪಟ್ಟ ಪ್ರಸಂಗವನ್ನು ಪ್ರಸ್ತಾಪಿಸಿದರು. ನೀತಿ ಸಂಹಿತೆ ಹೆಸರಿನಲ್ಲಿ ನಮ್ಮ ಕ್ಷೇತ್ರದ ಐಬಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ನೇಚರ್ ಕಾಲ್‍ಗೆ ಹೋಗಬೇಕು ಎಂದರೂ ಅಲ್ಲಿನ ಸಿಬ್ಬಂದಿ ಬಿಡಲಿಲ್ಲ. ಕೆಡಿಪಿ ಸಭೆಯಲ್ಲಿ ಭಾರೀ ಮಾತಾಡಿದ್ದರಲ್ವಾ ಇರಲಿ ಬಿಡಿ ಒಳಬಿಡಬೇಡಿ ಎನ್ನುವ ಸಂದೇಶ ಸಿಬ್ಬಂದಿ ಮೂಲಕ ಕಳಿಸಲಾಗಿತ್ತು. ಆದರೂ ನಾನು ಐಬಿ ಒಳ ಹೋದೆ ಆದರೆ ಬೀಗ ತೆಗೆಯಲಿಲ್ಲ. ಕಡೆಗೆ ಎಲ್ಲೋ ಹೊರಗೆ ಬಂದು ಶೌಚಾಲಯಕ್ಕೆ ಹೋದೆ ಅಂತ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಮಾತನಾಡಿ, ಈ ನೀತಿ ಸಂಹಿತೆ ಜಾರಿ ವಿಷಯ ಹೇಗಿದೆ ಎಂದರೆ ಆಸ್ಪತ್ರೆಗೆ ದಾಖಲಾದ ಗರ್ಭಿಣಿ ಸ್ಥಿತಿಯಂತಿದೆ. 4.9 ವರ್ಷದ ಸಿಟ್ಟನ್ನು ಅಧಿಕಾರಿಗಳು ಒಂದು ತಿಂಗಳಿನಲ್ಲೇ ತೀರಿಸಿಕೊಳ್ಳುತ್ತಾರೆ. ಅವರು ಏನು ಮಾಡಿದರೂ ಸುಮ್ಮನಿರಬೇಕು. ಅಲ್ಲಾಡಿದರೆ ಅಬಾರ್ಷನ್ ಆಗುತ್ತದೆ. ಹಾಗಾಗಿದೆ ಪರಿಸ್ಥಿತಿ ಎನ್ನುತ್ತಿದ್ದಂತೆ ಸದನ ನಗೆಗಡಲಲ್ಲಿ ತೇಲಿತು.
ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ದೇವಸ್ಥಾನ ಒಳ ಬರಲು ಪಾದರಕ್ಷೆ ಬಿಟ್ಟು ಹೋಗಬೇಕು ಅಂತ ನಿಯಮ ಮಾಡಿದ ಟ್ರಸ್ಟ್. ಹೊರಗಡೆ ಒಬ್ಬನನ್ನು ಕೂರಿಸಿ ಭಕ್ತರು ಪಾದರಕ್ಷೆ ಇಲ್ಲಿ ಬಿಟ್ಟು ಹೋಗುವಂತೆ ಸೂಚಿಸಿ ಎಂದಿದ್ದರು. ಆದರೆ ಪಾದರಕ್ಷೆ ಹಾಕದೇ ಬಂದ ಭಕ್ತನನ್ನು ತಡೆದು ಮನೆಗೆ ಹೋಗಿ ಪಾದರಕ್ಷೆ ಹಾಕಿಕೊಂಡು ಬಂದು ಇಲ್ಲಿ ಬಿಟ್ಟು ಒಳಹೋಗು ಎನ್ನುತ್ತಾನೆ. ಈ ಕಥೆಯ ರೀತಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಟೀಕಿಸಿದರು.