ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ಮಂಗಳವಾರ ವಿಧಾನ ಪರಿಷತ್‍ನಲ್ಲಿ ಚರ್ಚೆ ನಡೆಯಿತು. ಸಂವಿಧಾನದ ಚರ್ಚೆ ವೇಳೆ ಗಾಂಧೀಜಿ ಅವರನ್ನ ಸ್ಮರಿಸಿಕೊಂಡು ಚರ್ಚೆ ನಡೆಸಲಾಯಿತು. ಗಾಂಧೀಜಿ ಅಂದರೆ ಒಂದು ವಿಶ್ವವಿದ್ಯಾಲಯ. ಅವರಿಗೆ ಗೊತ್ತಿಲ್ಲದ ವಿಷಯ ಇಲ್ಲ. ಮಹಾತ್ಮ ಗಾಂಧೀಜಿ ನಮ್ಮ ದೇಶದ ರಾಷ್ಟ್ರಪಿತ ಆಗಿದ್ದು ನಮ್ಮದೇಶದ ಹೆಮ್ಮೆ ಅಂತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ತಿಳಿದುಕೊಳ್ಳದ ವಿಷಯವೇ ಇಲ್ಲ. ಶ್ರಮಿಕರ ಬದುಕು, ಮಹಿಳಾ ಸಬಲೀಕರಣ, ಗ್ರಾಮ ಸ್ವರಾಜ್ಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಅಧ್ಯಯನ ಮಾಡಿದ್ದರು. ಮಾನವ ಶಕ್ತಿಯಿಂದ ಯಾಂತ್ರಿಕ ಶಕ್ತಿ ಸೇರಿದಂತೆ ಎಲ್ಲದರ ಬಗ್ಗೆಯೂ ತಿಳಿದಿದ್ದರು. ಗಾಂಧೀಜಿ ಕಂಡ ಕನಸು ಸಾಮಾನ್ಯವಾಗಿ ಇರಲಿಲ್ಲ. ಅವರು ಯಾರೊಬ್ಬರ ಸ್ವತ್ತಲ್ಲ. ಜನಪ್ರಿಯ ಯೋಜನೆಗಳು ಎಂದರೆ ಹುಡುಗಾಟವಲ್ಲ ಅಂತ ಗಾಂಧೀಜಿ ಅವರ ಪರಿಕಲ್ಪನೆ, ಕನಸು ಕುರಿತು ಬೆಳಕು ಚೆಲ್ಲಿದರು ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ಪ್ರತಿಪಕ್ಷದ ಕೆಲ ಸದಸ್ಯರು ತಮ್ಮ ಆಸನದಲ್ಲೇ ಕುಳಿತು ಮಾಧುಸ್ವಾಮಿ ಅವರ ಮಾತನ್ನು ಮುಖಭಾವದಲ್ಲೇ ವ್ಯಂಗ್ಯವಾಡುವುದನ್ನು ಸಚಿವರು ಕಂಡರು. ಇದಕ್ಕೆ ಅಸಮಾಧಾನ ಗೊಂಡ ಸಚಿವರು, ನಾನು ನಾಟಕೀಯವಾಗಿ ಮಾತನಾಡುತ್ತಿಲ್ಲ. ನನ್ನ ಅಭಿಪ್ರಾಯ ನಾನು ವ್ಯಕ್ತಪಡಿಸುತ್ತೇನೆ. ಯಾರು ಏನೇ ಅಂದರೂ ಐ ಆ್ಯಮ್ ನಾಡ್ ಬಾದರ್ಡ್ ಎಬೌಟ್ ಎಂದರು. ಸಚಿವರ ಪದ ಬಳಕೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
Advertisement
Advertisement
ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಮುಖಭಾವ ನೋಡಿದರೆ ಯಾರು ಏನು ಅಂದುಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಂವಿಧಾನದ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದನ್ನು ನಾವು ಸ್ವಾಗತಿಸಿ ನಿಮ್ಮ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಹಾಗಿದ್ದರೂ ನೀವು ಬಾದರ್ಡ್ ಪದ ಬಳಸಿದ್ದು ಸರಿಯಲ್ಲ. ನೀವು ಚೆನ್ನಾಗಿ ಮಾತನಾಡುತ್ತಿದ್ದೀರಿ ಮಾತನಾಡಿ ಎಂದರು. ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಿ ಮಾತು ಮುಂದುವರಿಸಿದರು.